ದಾವಣಗೆರೆ: ಹಸುಗೂಸು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ಪೋಷಕರು ಹಾಗೂ ಮಗು ಖರೀದಿಸಿದ್ದ ದಂಪತಿಗೆ ಜಿಲ್ಲಾ ಮತ್ತು ಪ್ರಧಾನ ಸತ್ರ ನ್ಯಾಯಾಲಯವು 7 ವರ್ಷ ಶಿಕ್ಷೆ, ತಲಾ 25 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ನೀಡಿದೆ.
ಅಪರಾಧಿಗಳಾದ ನಗರದ ಬಿ.ಡಿ.ಲೇಔಟ್ ನಿವಾಸಿ ಸಿಕಂದರ್, ಪತ್ನಿ ಶಬೀನಾ ತಮ್ಮ ಮಗುವನ್ನು ಮಾರಾಟ ಮಾಡಿದ್ದರು. ಇಲ್ಲಿನ ಆಜಾದ್ ನಗರದ ಹಫೀಜಾ ಬಾನು ಹಾಗೂ ಮುಜೀಬುಲ್ಲಾ ದಂಪತಿಗಳು ಮಗುವನ್ನು ಪಡೆದುಕೊಂಡಿದ್ದ ಆರೋಪ ಸಾಬೀತಾಗಿದ್ದು, ಜಿಲ್ಲಾ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಮೂರು ತಿಂಗಳ ಮಗು ಮಾರಾಟ ಪ್ರಕರಣ: ಹೆತ್ತವರಿಗೆ, ಮಗು ಪಡೆದ ದಂಪತಿಗೆ ಶಿಕ್ಷೆ....! 2017ರ ಡಿಸೆಂಬರ್ 19ರಂದು ಶಬೀನಾ ಮಗುವಿಗೆ ಜನ್ಮ ನೀಡಿದ್ದರು. ಮೂರು ದಿನಗಳ ಬಳಿಕ ಮುಜೀಬುಲ್ಲಾ ಹಾಗೂ ಹಫೀಜಾ ಬಾನು ದಂಪತಿಗೆ ₹ 20 ಸಾವಿರಕ್ಕೆ ಮಾರಾಟ ಮಾಡಲಾಗಿತ್ತು.
ಈ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಪರಿಶೀಲನೆ ನಡೆಸಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅವರಿಗೆ ವರದಿ ನೀಡಿದ್ದರು.
ಬಳಿಕ ಮಹಿಳಾ ಪೊಲೀಸ್ ಠಾಣೆಗೂ ದೂರು ನೀಡಲಾಗಿತ್ತು. ಅಂದಿನ ಪಿಎಸ್ಐ ನಾಗಮ್ಮ ಹಾಗೂ ಟಿ.ವಿ.ದೇವರಾಜ್ ತನಿಖೆ ನಡೆಸಿ, ಚಾರ್ಜ್ ಶೀಟ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಅಂಬಾದಾಸ್ ಕುಲಕರ್ಣಿ ಮಗು ಮಾರಾಟ ಮಾಡಿದ ದಂಪತಿಗೆ, ಪಡೆದವರಿಗೂ ಶಿಕ್ಷೆ ವಿಧಿಸಿದ್ದಾರೆ.