ದಾವಣಗೆರೆ: ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮನೆ ಕುಸಿದು ಪುಟ್ಟ ಬಾಲಕಿ ಸಾವನ್ನಪ್ಪಿ ತಂದೆ ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕುಂಬಳೂರು ಗ್ರಾಮದಲ್ಲಿ ಇಂದು ಬೆಳಗ್ಗೆ ನಾಲ್ಕು ಗಂಟೆಗೆ ನಡೆದಿದೆ. ಸ್ಫೂರ್ತಿ (1) ಸಾವನ್ನಪ್ಪಿದ ಹೆಣ್ಣು ಮಗು. ಕೆಂಚಪ್ಪ (32) ಗಾಯಗೊಂಡ ತಂದೆ. ತಂದೆ ಕೆಂಚಪ್ಪ ಅವರಿಗೆ ಗಂಭೀರ ಗಾಯಗಳಾಗಿದ್ದು, ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿರುವ ಬೆನ್ನಲ್ಲೇ ಈ ಘಟನೆ ಜರುಗಿದೆ.
ಗಾಯಗೊಂಡ ಕೆಂಚಪ್ಪ ಅವರಿಗೆ ಸೇರಿದ ಮನೆ ಸಂಪೂರ್ಣವಾಗಿ ಹಾಳಾಗಿತ್ತು. ಗೋಡೆಗಳು ಕೂಡ ಬಿರುಕು ಬಿಟ್ಟಿದ್ದವು. ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ಎಲ್ಲಾ ಗೋಡೆಗಳು ಹಸಿಯಾಗಿ ನೆಲಕಚ್ಚಿವೆ. ಇದರಿಂದಾಗಿ ಈ ಅವಘಢ ಸಂಭವಿಸಿದೆ. ಕಳೆದ ದಿನ ಮಳೆ ಹೆಚ್ಚಾಗಿದ್ದರಿಂದ ಮುಂಜಾಗ್ರತಾ ಕ್ರಮ ವಹಿಸದ ಕೆಂಚಪ್ಪ ಅವರ ಕುಟುಂಬಸ್ಥರು ರಾತ್ರಿ ವೇಳೆ ಅದೇ ಮನೆಯಲ್ಲಿ ನಿದ್ದೆಗೆ ಜಾರಿದ್ದಾರೆ. ಕೆಂಚಪ್ಪ, ಮಗು ಸ್ಫೂರ್ತಿ ಹಾಗೂ ಆತನ ಪತ್ನಿ ಲಕ್ಷ್ಮಿ ಮಲಗಿಕೊಂಡಿದ್ದ ವೇಳೆ ಬೆಳಗಿನಜಾವ ಮೂರು ಗಂಟೆ ಸುಮಾರಿಗೆ ಮನೆಯ ಗೋಡೆ ಕುಸಿದು ಅವರ ಮೇಲೆ ಬಿದ್ದಿದೆ. ಈ ವೇಳೆ ಪುಟ್ಟ ಮಗು ಸ್ಫೂರ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ತಂದೆ ಗಂಭೀರವಾಗಿ ಗಾಯಗೊಂಡಿದ್ದಾರೆ. ತಾಯಿ ಅದೃಷ್ಟವಶಾತ್ ಪಾರಾಗಿದ್ದಾರೆ. ಈ ಘಟನೆ ಹರಿಹರ ತಾಲೂಕಿನ ಮಲೆಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು, ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಸ್ಫೂರ್ತಿಯನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.