ದಾವಣಗೆರೆ :ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯ ಕಾವೇರುತ್ತಿದ್ದು, ಕಾಂಗ್ರೆಸ್ ಮತ್ತು ಬಿಜೆಪಿಗೆ ಠಕ್ಕರ್ ಕೊಡಲು ಹಾಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಸಾವಿರಾರು ಜನರನ್ನು ಸೇರಿಸಿ ಸ್ವಾಭಿಮಾನಿ ಸಭೆ ನಡೆಸುವ ಮೂಲಕ ನಿರ್ಧಾರ ತಿಳಿಸಿದರು.
ಮಾಡಳ್ ಮಲ್ಲಿಕಾರ್ಜುನ್ ಮಾತನಾಡಿ, ಕಾರ್ಯಕರ್ತರು ಮತ್ತು ಮುಖಂಡರು ನನ್ನನ್ನು ಆಶೀರ್ವದಿಸಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಸಲಹೆ, ಅಭಿಪ್ರಾಯ ತಿಳಿಸಿದ್ದಾರೆ. ಐದು ವರ್ಷ ಮನೆಯಲ್ಲಿದ್ದು ಸಮಾಜ ಸೇವೆ ಮಾಡುತ್ತಾ ಕಾಲ ಕಳೆಯೋಣ, ಸಾರ್ವಜನಿಕ ಬದುಕು ಬೇಡ ಎಂದುಕೊಂಡಿದ್ದೆ. ಆದರೆ ಜನರ ಒತ್ತಾಯದಿಂದ ಒಂದು ಹೆಜ್ಜೆ ಮುಂದಿಟ್ಟಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದೇನೆ. ಯಾವುದೇ ವೈಯಕ್ತಿಕ ನಿರ್ಣಯಗಳನ್ನು ತೆಗೆದುಕೊಳ್ಳುವ ಬದಲು ಕಾರ್ಯಕರ್ತರ ಬಳಿ ಚರ್ಚಿಸಿಯೇ ತಾಲೂಕಿಗೆ ಒಳ್ಳೆಯದಾಗುವ ದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ ಎಂದರು.