ದಾವಣಗೆರೆ: ನಗರದ ಪಾಳುಬಿದ್ದ ಕೆರೆಯೊಂದು ಕೊಳೆಚೆ ನೀರು ಶೇಖರಣೆಯಾಗುವ ಸ್ಥಳವಾಗಿ ಮಾರ್ಪಾಡಾಗಿತ್ತು. ದುರ್ನಾತದಿಂದ ಕೂಡಿದ ಆ ಸ್ಥಳವನ್ನು ಜನರು ಸ್ವಚ್ಛ ಮಾಡೋದಿರಲಿ, ಅತ್ತ ತಲೆ ಹಾಕಿಯೂ ಕೂಡ ಮಲಗುತ್ತಿರಲಿಲ್ಲ. ಆದರೀಗ ಕೆರೆಗೆ ಕಾಯಕಲ್ಪ ದೊರೆತಿದೆ. ಸುಂದರ ಪ್ರವಾಸಿ ತಾಣವಾಗಿ ಗಮನ ಸೆಳೆಯುತ್ತಿದೆ.
ಪಾಳು ಬಿದ್ದಿದ್ದ ಐತಿಹಾಸಿಕ ಕೆರೆಗೆ ಕಾಯಕಲ್ಪ ರಾಣಿ ಕೆಳದಿ ಚನ್ನಮ್ಮ ಆಳ್ವಿಕೆಯ ಕಾಲದಲ್ಲಿ ನೀರಿನ ಕೊರತೆ ನೀಗಿಸುವ ಸಲುವಾಗಿ ಚನ್ನಗಿರಿಯ ಊರ ಮುಂದಲ ಕೆರೆ ಹಾಗೂ ಗಣಪತಿ ಹೊಂಡವನ್ನು ನಿರ್ಮಾಣ ಮಾಡಿದ್ದರು. ಅಂದಿನ ಕಾಲದಲ್ಲಿ ಇದೇ ಕೆರೆ ಇಡೀ ತಾಲ್ಲೂಕಿನ ಜನ ಜೀವನಾಡಿಯಾಗಿತ್ತು. ಆದರೆ ಕಾಲಕ್ರಮೇಣ ಕೆರೆ ನಶಿಸಿ ಹೋಗಿ ಕೊಳಚೆ ನೀರು ಶೇಖರಣೆಯಾಗಿತ್ತು.
ಐತಿಹಾಸಿಕ ಕೆರೆ ಅಭಿವೃದ್ಧಿಗೆ ಮುಂದಾದ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಈ ಕರೆಗೆ ಹೊಸ ರೂಪವನ್ನೇ ನೀಡಿದ್ದಾರೆ. ಕೆರೆಯಲ್ಲಿ ಸಂಗ್ರಹವಾದ ಕೊಳಚೆ ನೀರನ್ನು ಅಂಡರ್ ಗ್ರೌಂಡ್ ಮೂಲಕ ಚನ್ನಗಿರಿ ನಗರದ ಹೊರ ಬಾಗದಲ್ಲಿರುವ ಹರಿದ್ರಾವತಿ ಹಳ್ಳಕ್ಕೆ ಹರಿಬಿಟ್ಟು, ಕೆರೆಯ ಸುತ್ತಲು ಏರಿ ನಿರ್ಮಾಣ ಮಾಡಿ ಎರಡು ಬೋರ್ ವೆಲ್ ಹಾಗೂ ಸೂಳೆಕೆರೆಯಿಂದ ನೀರು ತಂದು ಕೆರೆ ತುಂಬಿಸಿದ್ದಾರೆ. ನಾಲ್ಕು ಕೋಟಿ ವೆಚ್ಚದಲ್ಲಿ ಸುಂದರವಾದ ಕೆರೆ ನಿರ್ಮಾಣ ಮಾಡುವುದರ ಜೊತೆಗೆ ಬೋಟಿಂಗ್ ವ್ಯವಸ್ಥೆಯನ್ನು ಕೂಡ ಮಾಡಿದ್ದಾರೆ. 25 ಎಕರೆ ವಿಸ್ತೀರ್ಣದಲ್ಲಿರುವ ಕೆರೆಯ ಸುತ್ತ ವಾಕಿಂಗ್ ಪಾತ್, ರಾತ್ರಿ ವೇಳೆ ಝಗಮಗಿಸುವ ಲೈಟಿಂಗ್ಸ್ ಜೊತೆಗೆ ಕಾರಂಜಿ ವ್ಯವಸ್ಥೆಯನ್ನು ಮಾಡಲಾಗಿದೆ.
ಬೋಟ್ ರೈಡ್ ಮಾಡಿದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕೆರೆ ಉದ್ಘಾಟನೆ: ಬುಧವಾರದಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಅವರ ಪತ್ನಿ ಬಾಗಿನ ಅರ್ಪಿಸುವ ಮೂಲಕ ಕರೆ ಉದ್ಘಾಟನೆ ಮಾಡಿದರು. ಅದ್ಧೂರಿಯಾಗಿ ಕುಂಬ ಮೇಳವೂ ನಡೆಯಿತು. ನಂತರ ಜನರು ಬೋಟಿಂಗ್ ಮಾಡಿ ಖುಷಿಪಟ್ಟರು.
ಕೆರೆ ನಿರ್ವಹಣೆ:ಬೋಟಿಂಗ್ ಹಾಗೂ ಕೆರೆ ನಿರ್ವಹಣೆಯನ್ನು ಶಿವಮೊಗ್ಗ ಮೂಲದ ಏಜೆನ್ಸಿಗೆ ವಹಿಸಲಾಗಿದೆ. ಕೆರೆಯ ನಿರ್ವಹಣೆ ಜೊತೆಗೆ ವಾಟರ್ ಗೇಮ್ಸ್, ಬೋಟಿಂಗ್ ಟ್ರೈನಿಂಗ್ ಕೂಡ ಇದ್ದು, ಜನರಿಗೂ ಹೊರೆಯಾಗದ ಹಾಗೆ ಶುಲ್ಕ ತೆಗೆದುಕೊಳ್ಳಲಾಗುವುದು ಎಂದು ನಿರ್ವಹಣಾ ಮಂಡಳಿ ತಿಳಿಸಿದೆ.