ದಾವಣಗೆರೆ : ಶಾಸಕ ಎಂಪಿ ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರು ಸಾವಿನ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.
ಹೊನ್ನಾಳಿಯಲ್ಲಿ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ಕಾರು ದುರಂತದಲ್ಲಿ ಸಾವನ್ನಪ್ಪಿದ್ದ ಚಂದ್ರಶೇಖರ್ ಸಾವು, ಕೊಲೆ ಅದು ಅಪಘಾತವಲ್ಲ. ಚಂದ್ರು ಸಾವನ್ನಪ್ಪಿ ಒಂದೂವರೆ ತಿಂಗಳಾದರೂ ತನಿಖೆ ಆಗದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಸಿಐಡಿಗೆ ವಹಿಸುವಂತೆ ಮನವಿ ಮಾಡಿಕೊಂಡಿದ್ದೆ. ಅದರಂತೆ ಚಂದ್ರು ಸಾವಿನ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಕಳೆದ ದಿನ ಸಿಐಡಿ ಅಧಿಕಾರಿಗಳು ನನ್ನ ನಿವಾಸಕ್ಕೆ ಭೇಟಿ ನೀಡಿ ಚಂದ್ರು ಸಾವಿನ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಅಪಘಾತದ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಸಿಐಡಿ ಅಧಿಕಾರಿಗಳು ಚಂದ್ರು ಸಾವಿನ ಬಗ್ಗೆ ಸ್ನೇಹಿತರಿಂದಲೂ ಮಾಹಿತಿ ಪಡೆದಿದ್ದಾರೆ. ಅಲ್ಲದೇ ಮನೆಯಿಂದ ಹೊರಗಡೆ ಹೋಗಿದ್ದರ ಬಗ್ಗೆ ಹಾಗೂ ಅಪಘಾತ ಯಾವ ರೀತಿ ಆಗಿದೆ ಎಂದು ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ಪ್ರಕರಣ ತನಿಖೆ ಹಂತದಲ್ಲಿದೆ. ಸಿಐಡಿ ತನಿಖೆಯಿಂದ ಚಂದ್ರು ಸಾವಿನ ಪ್ರಕರಣದ ಸತ್ಯಾಂಶ ಹೊರಬೀಳಲಿದೆ ಎಂದರು.
ಇದು ಅಪಘಾತ ಅಲ್ಲ. ಇದೊಂದು ಕೊಲೆ : ಚಂದ್ರು ಸಾವು ಅಪಘಾತ ಅಲ್ವೇ ಅಲ್ಲ, ಇದೊಂದು ಕೊಲೆ. ಚಂದ್ರು ಹೊನ್ನಾಳಿ ಕ್ಷೇತ್ರದಲ್ಲಿ ಉತ್ತಮ ಒಡನಾಟ ಹೊಂದಿದ್ದ. ಚಂದ್ರಶೇಖರ ನೆನೆದು ಇವತ್ತಿಗೂ ಕ್ಷೇತ್ರದ ಜನ ಕಣ್ಣೀರು ಹಾಕುತ್ತಾರೆ. ಚಂದ್ರುವಿನ ಸಾವಿನಲ್ಲಿ ನಾನು ಯಾವುದೇ ರಾಜಕೀಯ ಮಾಡುವುದಿಲ್ಲ. ಚಂದ್ರು ಆತ್ಮಕ್ಕೆ ಶಾಂತಿ ಸಿಗಬೇಕು, ನ್ಯಾಯ ಸಿಗಬೇಕು ಎಂದರು. ತನಿಖೆ ವಿಳಂಬವಾಗಿದ್ದರಿಂದ ನೋವಾಗಿದೆ. ಎಲ್ಲವನ್ನು ತಡೆದುಕೊಳ್ಳುವ ಶಕ್ತಿ ಭಗವಂತ ನೀಡಿದ್ದಾನೆ ಎಂದು ಪ್ರತಿಕ್ರಿಯಿಸಿದರು.