ದಾವಣಗೆರೆ: ಇದು 21 ದಿನಗಳ ಅತ್ಯಂತ ಕಠಿಣ ವ್ರತಾಚರಣೆ. ಬಿಸಿಲು, ಗಾಳಿ, ಚಳಿ ಲೆಕ್ಕಿಸದೇ ಮಾಲಾಧಾರಿಗಳು ಹಾಗೂ ಇರುಮಡಿ ಕಟ್ಟಿದವರು ಕಾಲ್ನಡಿಗೆಯಲ್ಲಿ ಬರುತ್ತಾರೆ. ಈ ವ್ರತ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗಿಂತ ಕ್ಲಿಷ್ಟಕರವಾಗಿರುತ್ತೆ.
ಬಂಜಾರರ ಕುಲಗುರು ಸಂತ ಸೇವಾಲಾಲ್ ಮಹಾರಾಜರ 281ನೇ ಜಯಂತ್ಯುತ್ಸವದ ಸಂಭ್ರಮ ಕಳೆಗಟ್ಟಿದೆ. ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪ ಗ್ರಾಮದಲ್ಲಿ ಮಾಲಾಧಾರಿಗಳು, ಇರುಮುಡಿ ಕಟ್ಟಿದವರು ತಂಡೋಪತಂಡವಾಗಿ ಆಗಮಿಸಿದ್ದಾರೆ. ರಾಜ್ಯ ಮಾತ್ರವಲ್ಲದೆ, ದೇಶದ ವಿವಿಧೆಡೆಯಿಂದ ಸಾವಿರಾರು ಮಂದಿ ಆಗಮಿಸುತ್ತಿದ್ದಾರೆ. ಸೇವಾಲಾಲ್ ಜನಿಸಿದ ಈ ನೆಲದಲ್ಲಿ ಮಾಲೆ ತೆಗೆದರೆ ಹಾಗೂ ಇರುಮುಡಿ ವಿಸರ್ಜಿಸಿದರೆ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಲಂಬಾಣಿಗರಲ್ಲಿದೆ. ಹಾಗಾಗಿ ಪಾದಯಾತ್ರೆ ಮೂಲಕ ಇಲ್ಲಿಗೆ ಬಂದು ಮಾಲೆ ತೆಗೆಯುತ್ತಾರೆ.
ಸಂತ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವದ ನಿಮಿತ್ತ ಕಠಿಣ ವ್ರತ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗಿಂತ ಅತ್ಯಂತ ಕಠಿಣ ವ್ರತ ಲಂಬಾಣಿ ಸಮಾಜದವರದ್ದು ಎನ್ನುವುದು ಈ ಸಮುದಾಯದ ಗುರುಗಳ ಮಾತು. ಮಾಲೆ ಹಾಕಿದ ದಿನದಿಂದ ಚಪ್ಪಲಿ ಧರಿಸುವುದಿಲ್ಲ. ಹೆಣ್ಣು ಮಕ್ಕಳು ತಯಾರಿಸಿದ ಅಡುಗೆ ಸೇವಿಸುವುದಿಲ್ಲ. ಬದಲಾಗಿ ವಾಹನದ ಮೂಲಕ ಇಲ್ಲಿಗೆ ಬರುವಂತಿಲ್ಲ. ಎಷ್ಟೇ ದೂರವಾದರೂ ಕಾಲ್ನಡಿಗೆಯಲ್ಲಿ ಬರಬೇಕು. ಅಷ್ಟು ಕಟ್ಟುನಿಟ್ಟಾಗಿ ಬ್ರಹ್ಮಚರ್ಯ ವ್ರತವನ್ನು ಲಂಬಾಣಿ ಸಮುದಾಯದ ಪುರುಷರು ಆಚರಿಸುತ್ತಾರೆ.
ಈ ವರ್ಷ ಒಂದು ಲಕ್ಷಕ್ಕೂ ಅಧಿಕ ಮಂದಿ ಮಾಲೆ ಧರಿಸಿದ್ದು, ಇದು ಹೆಚ್ಚಾಗುವ ನಿರೀಕ್ಷೆ ಇದೆ. ಬಂಜಾರ ಸಮುದಾಯದ ಬಹುತೇಕರು ಅಯ್ಯಪ್ಪ ಸ್ವಾಮಿಗೆ ಮಾಲೆ ಹಾಕಿ ಹೋಗುವುದಿಲ್ಲ. ಕೆಲವೇ ಕೆಲವರು ಮಾತ್ರ ಅವರಿಷ್ಟಾರ್ಥಕ್ಕೆ ಹೋಗಬಹುದಷ್ಟೇ ಎನ್ನುವ ಭಕ್ತರು, ಸಂತ ಸೇವಾಲಾಲ್ ಆಶೀರ್ವಾದವಿದ್ದರೆ ನಮ್ಮೆಲ್ಲಾ ಪಾಪಕರ್ಮಗಳು ದೂರವಾಗಿ ಒಳಿತಾಗುತ್ತೆ ಎಂಬ ನಂಬಿಕೆ ನಮ್ಮದು ಎನ್ನುತ್ತಾರೆ.