ದಾವಣಗೆರೆ:ಜಿಲ್ಲೆಯ ಚನ್ನಗಿರಿ ತಾಲೂಕಿನ ಕಾಕನೂರು ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ವಿಷಪೂರಿತ ಆಹಾರ ಪೂರೈಕೆ ಹಾಗೂ ಕರ್ತವ್ಯ ಲೋಪ ಎಸಗಿದ ಪ್ರಾಂಶುಪಾಲ ಮಂಜುನಾಥ್ ಪುರದ್ ಹಾಗೂ ನಿಲಯ ಪಾಲಕಿ ನಸೀಮಾ ಬಾನು ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ. ವಿ ಆದೇಶ ಹೊರಡಿಸಿದ್ದಾರೆ.
ಈ ವಸತಿ ಶಾಲೆಯಲ್ಲಿ ಸೋಮವಾರ ಬೆಳಗ್ಗೆ ಉಪಹಾರ ಸೇವಿಸಿದ ನಂತರ ಕೆಲ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿತ್ತು. ತಕ್ಷಣ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಅಸ್ವಸ್ಥರಾಗಲು ವಿಷಪೂರಿತ ಆಹಾರ ಸೇವನೆ ಕಾರಣವಾಗಿದ್ದು, ಸರಿಯಾದ ನಿರ್ವಹಣೆ ಮಾಡದಿರುವುದು ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳದಿರುವುದು ಕಾರಣವಾಗಿದೆ. ಈ ಘಟನೆಗೆ ವಸತಿ ಶಾಲೆಯ ಪ್ರಾಂಶುಪಾಲರು ಮತ್ತು ನಿಲಯ ಪಾಲಕಿ ಅವರು ಕರ್ತವ್ಯದ ವೇಳೆ ನಿರ್ಲಕ್ಷ್ಯ ವಹಿಸಿರುವುದು ಕಾರಣ ಎಂದು ಪರಿಗಣಿಸಿ ಅಮಾನತುಗೊಳಿಸಲಾಗಿದೆ.
ಹೆಚ್ಚುವರಿ ಪ್ರಭಾರ ವ್ಯವಸ್ಥೆ:ಕಾಕನೂರು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರು ಮತ್ತು ನಿಲಯ ಪಾಲಕಿಯನ್ನು ಅಮಾನತುಗೊಳಿಸಿರುವುದರಿಂದ ಪ್ರಾಂಶುಪಾಲರನ್ನಾಗಿ ಮಾವಿನಹೊಳೆ ಇಂದಿರಾ ಗಾಂಧಿ ವಸತಿ ಶಾಲೆ ಪ್ರಾಂಶುಪಾಲರಾದ ಗುರುಮೂರ್ತ್ಯಪ್ಪ ಅವರಿಗೆ ಹೆಚ್ಚುವರಿ ಪ್ರಭಾರ ವಹಿಸಿಕೊಳ್ಳಲು ಆದೇಶಿಸಲಾಗಿದೆ. ಮತ್ತು ನಿಲಯ ಪಾಲಕರಾಗಿ ಕಾಕನೂರು ವಸತಿ ಶಾಲೆಯ ಸ್ಟಾಫ್ ನರ್ಸ್ ಅನಿತಾ ಆರ್. ಅವರಿಗೆ ಹೆಚ್ಚುವರಿ ಪ್ರಭಾರದಲ್ಲಿರಿಸಿ ಆದೇಶಿಸಲಾಗಿದೆ.