ದಾವಣಗೆರೆ: ಕಳವು ಮಾಡಿದ ದ್ವಿಚಕ್ರ ವಾಹನಗಳಿಗೆ ನಕಲಿ ದಾಖಲೆ ಸೃಷ್ಟಿಸಲು ಸ್ಥಳೀಯ ಬ್ರೋಕರ್ಗಳಿಗೆ ಸಹಕರಿಸುತ್ತಿದ್ದ ಆರೋಪದ ಮೇರೆಗೆ ಆರ್ಟಿಒ ಕಚೇರಿಯ ನಾಲ್ವರು ಸಿಬ್ಬಂದಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಳವು ಮಾಡಿದ್ದ ಬೈಕ್ಗಳ ಮಾಲೀಕರಿಗೆ ಗೊತ್ತಿಲ್ಲದಂತೆ ನಕಲಿ ದಾಖಲೆ ಸೃಷ್ಟಿಸಿ ಬೈಕ್ಗಳನ್ನು ಬೇರೊಬ್ಬರ ಹೆಸರಿಗೆ ವರ್ಗಾಯಿಸುತ್ತಿದ್ದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ದ್ವಿತೀಯ ದರ್ಜೆಯ ಸಹಾಯಕರಾಗಿರುವ (ಎಸ್ಡಿಎ) ವಸಂತ ಕುಮಾರ್, ಶಶಿಕುಮಾರ್, ಜಗದೀಶ್, ಪ್ರದೀಪ್ ಬಂಧಿತ ಸಿಬ್ಬಂದಿಯಾಗಿದ್ದಾರೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳುವಾಗಿದ್ದ ದ್ವಿಚಕ್ರ ವಾಹನದ ತನಿಖೆ ನಡೆಸುತ್ತಿದ್ದಾಗ ಈ ನಕಲಿ ದಾಖಲೆ ಸೃಷ್ಟಿಸುವ ಪ್ರಕರಣ ಬೆಳಕಿಗೆ ಬಂದಿದೆ.
ಬೈಕ್ ಕಳೆದುಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಮಾಲೀಕರಿಗೆ ತಿಳಿಯದಂತೆ ನಕಲಿ ದಾಖಲೆ ಸೃಷ್ಟಿಸಿ ಈ ಕೃತ್ಯ ಎಸಗಲಾಗಿದೆ ಎಂದು ಎಸ್ಪಿ ಡಾ ಅರುಣ್ ಕೆ ಹೇಳಿದ್ದಾರೆ. ಹೊನ್ನಾಳಿಯ ಪೊಲೀಸರು ಕಳವಾಗಿರುವ ಬೈಕ್ ಬಗ್ಗೆ ತನಿಖೆ ನಡೆಸಿದಾಗ ಕಳವಾಗಿರುವ ದ್ವಿಚಕ್ರ ವಾಹನಗಳ ದಾಖಲೆ ನಕಲಿ ಸೃಷ್ಟಿಸಿರುವುದು ಆರ್ಟಿಒ ಕಚೇರಿಯಲ್ಲೇ ಎಂದು ತಿಳಿದು ಬಂದಿದೆ. ಬಳಿಕ ಸೈಬರ್ ಠಾಣೆಯ ಪೊಲೀಸರು ಹೆಚ್ಚಿನ ತನಿಖೆ ಮಾಡಿ ಪ್ರಾದೇಶಿಕ ಸಾರಿಗೆ ಕಚೇರಿಯ ಸಿಬ್ಬಂದಿಯನ್ನು ವಿಚಾರಿಸಿದಾಗ ವಾಹನದ ಮಾಲೀಕರ ಬದಲಿಗೆ ಬ್ರೋಕರ್ ರಸೂಲ್ ಎಂಬುವ ದಾಖಲೆಗೆ ಸಹಿ ಮಾಡಿರುವುದು ತಿಳಿದು ಬಂದಿದೆ. ಈ ಪ್ರಕರಣ ಸಂಬಂಧ ರಸೂಲ್ ಸೇರಿದಂತೆ ನಾಲ್ಕು ಜನ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಬಸವನಗರ ಪೊಲೀಸ್ ಠಾಣೆಯಲ್ಲಿ 10 ಪ್ರಕರಣಗಳನ್ನು ದಾಖಲಿಸಲಾಗಿದೆ.