ದಾವಣಗೆರೆ: ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಿಸಿದ್ರು ಸಹ ದಲಿತರು ನಮಗೆ ಮತ ಹಾಕಿಲ್ಲ ಎಂದು ಇಡೀ ಸಮುದಾಯವನ್ನು ಆಕ್ಷೇಪಾರ್ಹವಾಗಿ ನಿಂದಿಸಿದ್ದ ಹರಿಹರದ ಬಿಜೆಪಿ ನೂತನ ಶಾಸಕ ಬಿ ಪಿ ಹರೀಶ್ ವಿರುದ್ದ ದೂರು ದಾಖಲಾಗಿದೆ.
ದಲಿತರನ್ನು ಆಕ್ಷೇಪಾರ್ಹವಾಗಿ ನಿಂದಿಸಿದ್ದಕ್ಕೆ ಬಿಜೆಪಿ ನೂತನ ಶಾಸಕ ಬಿ ಪಿ ಹರೀಶ್ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆ ಅಡಿ ಐಪಿಸಿ 504 ಹಾಗೂ ಕಲಂ 3(1)(o), 3(1)(r) SC ST PA act 1989 ನಡಿ ಪ್ರಕರಣವನ್ನು ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
ಬಿ ಪಿ ಹರೀಶ್ ದಲಿತರ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಭೋವಿ ಸಮಾಜದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವುದನ್ನು ಖಂಡಿಸಿ ಶಾಸಕ ಬಿ ಪಿ ಹರೀಶ್ ವಿರುದ್ಧ ಮಂಗಳವಾರ ಸಮುದಾಯದ ಜನರು ಬೀದಿಗಿಳಿದು ಹರಿಹರದಲ್ಲಿ ಪ್ರತಿಭಟನೆ ನಡೆಸಿದ್ದರು.
ಚುನಾವಣೆ ಫಲಿತಾಂಶ ಬರುತ್ತಿದ್ದಂತೆ ದಾವಣಗೆರೆ ಜಿಲ್ಲೆಯ ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ ಪಿ ಹರೀಶ್ ಮಾತನಾಡಿ, ರಾಜ್ಯದಲ್ಲಿ ಒಳ ಮೀಸಲಾತಿ ತಂದು ಮಾದಿಗರಿಗೆ ಹೆಚ್ಚು ಶೇಕಡಾವಾರು ನೀಡಲಾಗಿದೆ. ಆದರೆ ಬಿಜೆಪಿಗೆ ಮಾದಿಗ ಸಮುದಾಯ ಮತ ಹಾಕಿಲ್ಲ ಎಂದಿದ್ದರು. ಇದೇ ಸಂದರ್ಭದಲ್ಲಿ ಆಕ್ಷೇಪಾರ್ಹ ಪದವನ್ನು ಬಳಸಿದ್ದರು. ಈ ಹೇಳಿಕೆಗೆ ಮಾದಿಗ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಪ್ರತಿಭಟನೆ ಸಹ ನಡೆಸಿದ್ದರು.
ಏನಿದು ಘಟನೆ..ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ ಪಿ ಹರೀಶ್ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ದಲಿತ ಮುಖಂಡರು ಹಾಗೂ ಕೆಲ ಪೌರ ಕಾರ್ಮಿಕರು ದಾವಣಗೆರೆ ನಿವಾಸದ ಬಳಿ ಅಭಿನಂದನೆ ತಿಳಿಸಲು ಹೋಗಿದ್ದರು. ಈ ಸಂದರ್ಭದಲ್ಲಿ ಶಾಸಕ ಬಿ ಪಿ ಹರೀಶ್ ಅವರು ಆಕ್ಷೇಪಾರ್ಹ ಹೇಳಿಕೆ ಮೂಲಕ ನಿಂದನೆ ಮಾಡಿದ್ದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆ ಪ್ರತಿಕ್ರಿಯಿಸಿದ್ದ ಅವರು, ಒಳ ಮೀಸಲಾತಿ ಪಡೆದ ಮಾದಿಗ ಸಮಾಜ ನಮ್ಮ ಜತೆ ಇರಬೇಕಿತ್ತು, ಬಂಜಾರ ಭೋವಿ ಅವರು ನಮಗೆ ಮತ ಹಾಕಿಲ್ಲ ಎಂದು ಬೇಜಾರು ಇಲ್ಲ. ಅದ್ರೇ ಅವರಿಗೆ ಸಹಾಯ ಮಾಡಿದ್ರು ಇಡೀ ರಾಜ್ಯದಲ್ಲಿ ಬಿಜೆಪಿ ಪಕ್ಷ ಈ ಪರಿಸ್ಥಿತಿಗೆ ಬರಲು ಕಾರಣ ಅವರ ಕಾಲೋನಿಯಲ್ಲಿ ಮತಗಳು ಕಡಿಮೆ ಬಂದಿವೆ.
''ಸ್ವಾಭಾವಿಕವಾಗಿ ನಾವು ಹೇಳ್ತಿವಿ. ನಿಮ್ಮ ಅಪ್ಪಗೆ ಹುಟ್ಟಿದ್ರೇ ಹೊಡಿಯಪ್ಪ ಎಂದು, ಅವನು ಹೊಡೆದ್ರೆ ಮಾತ್ರ ಅವನು ಅಪ್ಪನಿಗೆ ಹುಟ್ಟಿದವನಲ್ಲ ಇದು ಲೋಕಾರೂಢಿ. ಅಪ್ಪನಿಗೆ ಹುಟ್ಟಿದವರು ಮಾತ್ರ ಮತ ಹಾಕಿದ್ದು ಎಂದು ಅಂದಿದ್ದು ಸತ್ಯ'' ಎಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಇದೀಗ ನೂತನ ಶಾಸಕ ಹರೀಶ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ದಾವಣಗೆರೆಯ ಎಸ್ಪಿ ಅರುಣ್ ಅವರು ದೂರು ದಾಖಲಾಗಿರುವುದನ್ನು ಖಾತ್ರಿ ಪಡಿಸಿದ್ದಾರೆ.
ಇದನ್ನೂಓದಿ:ದಲಿತ ಸಮುದಾಯದ ಪ್ರತಿಕ್ರಿಯೆ ಬರುವ ಮುನ್ನವೇ ಹೈಕಮಾಂಡ್ ಎಚ್ಚೆತ್ತುಕೊಳ್ಳುವುದು ಒಳ್ಳೆಯದು: ಪರಮೇಶ್ವರ್