ದಾವಣಗೆರೆ: ಯಾರ ಜೊತೆ ಹೊಂದಾಣಿಕೆಯ ಪ್ರಶ್ನೆಯೆ ಇಲ್ಲ, ರಾಜ್ಯದಲ್ಲಿ ಬಿಜೆಪಿ ಪರ ಒಳ್ಳೆಯ ವಾತಾವರಣ ಇದೆ. ನೂರಕ್ಕೆ ನೂರರಷ್ಟು ನಾವು ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು 135 ಸೀಟು ಗೆದ್ದು ಸ್ವಂತ ಬಲದಿಂದ ಅಧಿಕಾರಕ್ಕೆ ಬರುತ್ತೇವೆ. ಯಾರ ಜೊತೆ ಹೊಂದಾಣಿಕೆಯ ಪ್ರಶ್ನೆಯೆ ಇಲ್ಲ. ಬಜರಂಗ ದಳ ವಿಚಾರದಲ್ಲಿ ಕಾಂಗ್ರೆಸ್ ಮೂರ್ಖತನ ಮಾಡಿದೆ. ಮುಂಬರುವ ದಿನಗಳಲ್ಲಿ ಅವರಿಗೆ ತಕ್ಕ ಶಾಸ್ತಿ ಆಗುತ್ತೆ. ಮೋದಿ ಅಮಿತಾ ಶಾ ರೋಡ್ ಶೋ ನಂತರ ವಾತಾವರಣ ಬದಲಾಗಿದೆ. ಬಿಜೆಪಿಗೆ ಮತ್ತಷ್ಟು ಬಲ ಬಂದಿದೆ.
ಸ್ವತಂತ್ರ ಸರ್ಕಾರ ರಚನೆ ಮಾಡುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು. ಇನ್ನು ಸ್ವತಃ ಶಕ್ತಿ ಮೇಲೆ ಸರ್ಕಾರ ರಚನೆ ಮಾಡಲಿದ್ದು, ನಮ್ಮ ಕಾರ್ಯಕರ್ತರು ಹಗಲು ರಾತ್ರಿ ಎನ್ನದೇ ಕೆಲಸ ಮಾಡ್ತಿದ್ದಾರೆ. ನೂರಕ್ಕೆ ನೂರರಷ್ಟು ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಬಿಜೆಪಿ ಮುಖಂಡ ಕಾಂಗ್ರೆಸ್ ಸೇರ್ಪಡೆ, ಶಾಸಕ ರೇಣುಕಾಚಾರ್ಯಗೆ ಶಾಕ್
ಬಿಜೆಪಿ ಸರ್ಕಾರ ರೈತ ವಿರೋಧಿಯೆಂದ ಮಾಜಿ ಸಿಎಂ ಕುಮಾರಸ್ವಾಮಿ: ನಿನ್ನೆಯ ದಿನ ದಾವಣಗೆರೆ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪರ ಮತಯಾಚಿಸಲು ಆಗಮಿಸಿದ್ದ ಅವರು ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ, ಬಿಜೆಪಿ ಸರ್ಕಾರ ರೈತ ವಿರೋಧಿ ಸರ್ಕಾರ ಪ್ರತಿಯೊಂದು ಬೆಲೆ ಏರಿಕೆ ಮಾಡಿದೆ. ಸಿಲಿಂಡರ್ ಬೆಲೆ ಗಗನಕ್ಕೇರಿದೆ. ನಮ್ಮ ಸರ್ಕಾರ ರಚನೆ ಆದರೆ ಪ್ರತಿ ವರ್ಷ ಐದು ಸಿಲಿಂಡರ್ ಉಚಿತವಾಗಿ ನೀಡುತ್ತೇವೆ ಎಂದು ಹೇಳಿದರು.