ದಾವಣಗೆರೆ: ಕಾಂಗ್ರೆಸ್ ನಾಯಕರು ಕೂಸು ಹುಟ್ಟುವ ಮುಂಚೆ ಕುಲಾವಿ ಹೊಲಿಸಿದ್ರು ಎಂಬಂತೆ ಆಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಡುವೆ ನಡೆಯುತ್ತಿದೆ ಎನ್ನಲಾದ ಸಿಎಂ ಗಾದಿಗಾಗಿನ ಶೀತಲ ಸಮರ ಕುರಿತು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವ್ಯಂಗ್ಯವಾಡಿದರು.
ಹೊನ್ನಾಳಿಯ ಶಾಸಕ ಎಂ.ಪಿ ರೇಣುಕಾಚಾರ್ಯ ನಿವಾಸಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಅಧಿಕಾರಕ್ಕೆ ಬಂದೇ ಬಿಡುತ್ತೇವೆ ಅನ್ನೋ ರೀತಿ ವರ್ತಿಸುತ್ತಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನವರು 75 ಸೀಟ್ಗಳನ್ನು ಸಹ ಗೆಲ್ಲುವುದಿಲ್ಲವೆಂದು ಭವಿಷ್ಯ ನುಡಿದರು.