ದಾವಣಗೆರೆ :ಕಂಕಣ ಭಾಗ್ಯ ಕೂಡಿ ಬಂದ್ರೆ ಯಾರದ್ದು ತಾನೇ ಮದುವೆ ಆಗಲ್ಲ ಹೇಳಿ. ಆದ್ರೆ, ಇಲ್ಲೊಬ್ಬ ಹುಟ್ಟು ದಿವ್ಯಾಂಗನ ಬಾಳಲ್ಲಿ ಯುವತಿಯೊಬ್ಬಳು ಬೆಳಕಾಗಿ ಬಂದಿದ್ದಾಳೆ. ಜೀವನದಲ್ಲಿ ಕೈಹಿಡಿದು ನಡೆಸುತ್ತೇನೆ ಎಂದು ಒಪ್ಪಿಕೊಂಡ ಆ ಯುವತಿ ನಿರ್ಧಾರಕ್ಕೆ ಮಣಿದ ಆ ದಿವ್ಯಾಂಗ ಯುವಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾನೆ. ಇಡೀ ಗ್ರಾಮಸ್ಥರು ಖುದ್ದು ಖರ್ಚುವೆಚ್ಚ ಹಾಕಿ, ಧಾಮ್‌ಧೂಮ್ ಎಂದು ಮದುವೆ ಮಾಡಿದ್ದಾರೆ.
ಇಂತಹದ್ದೊಂದು ಅಪರೂಪದ ಘಟನೆಗೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಭರಮಸಮುದ್ರ ಎಂಬ ಗ್ರಾಮ ಸಾಕ್ಷಿಯಾಗಿದೆ. ಇದೇ ಗ್ರಾಮದ ದಿವ್ಯಾಂಗ ಯುವ ಪದವೀಧರ ರಂಗಸ್ವಾಮಿಯವರ ಬಾಳಲ್ಲಿ ಇದೇ ಜಗಳೂರು ತಾಲೂಕಿನ ಚಿಕ್ಕಬನ್ನಿಹಟ್ಟಿ ಗ್ರಾಮದ ವಧು ಬೆಳಕಾಗಿ ಬಂದಿದ್ದಾಳೆ. ಇಬ್ಬರ ಮದುವೆಯನ್ನು ಭರಮಸಮುದ್ರ ಗ್ರಾಮದ ಗ್ರಾಮಸ್ಥರು ಗ್ರಾಮ ದೇವತೆ ಯಲ್ಲಮ್ಮ ದೇವತೆಯ ಸಮ್ಮುಖದಲ್ಲಿ ನೆರವೇರಿಸಿದ್ದಾರೆ.
ವಧು ಕರಿಬಸಮ್ಮ ಅವರು ಶಿಕ್ಷಣ ಪಡೆಯದಿದ್ರೂ ವರ ರಂಗಸ್ವಾಮಿ ಅವರ ದೂರದ ಸಂಬಂಧಿಯಾಗಿದ್ದರಿಂದ ಮದುವೆ ಮಾಡಿಕೊಳ್ಳಲು ಒಪ್ಪಿದ್ದಾಳೆ. ಅಲ್ಲದೇ, ದಿವ್ಯಾಂಗ ಯುವಕ ರಂಗಸ್ವಾಮಿ ಇಡೀ ಭರಮಸಮುದ್ರ ಗ್ರಾಮಸ್ಥರೊಂದಿಗೆ ಒಳ್ಳೆ ಒಡನಾಟ ಹೊಂದಿದ್ದರಿಂದ ಇಡೀ ಗ್ರಾಮಸ್ಥರು ಚಿನ್ನದ ತಾಳಿ, ಚಿನ್ನದ ಓಲೆ, ಸೀರೆ ಸೇರಿದಂತೆ ಮದುವೆಗೆ ಬೇಕಾಗುವ ಪ್ರತಿ ವಸ್ತುಗಳನ್ನು ತಂದು ಖರ್ಚು ವೆಚ್ಚ ಭರಿಸಿ ಮದುವೆ ಮಾಡಿಸಿರುವುದು ವಿಶೇಷ.