ದಾವಣಗೆರೆ: ಬಿಜೆಪಿಯು ಮಧ್ಯಂತರ ಚುನಾವಣೆಗೆ ಸಿದ್ಧವಿಲ್ಲ. ಒಂದು ವೇಳೆ ಚುನಾವಣೆ ನಡೆದರೆ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯ ಗಳಿಸಿ ಬಿಜೆಪಿ ಸರ್ಕಾರ ರಚಿಸಲಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ 171 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಮತದಾರರು ನಮ್ಮ ಮೇಲೆ ಭರವಸೆ ಇಟ್ಟಿದ್ದಾರೆ. ಅನಿವಾರ್ಯವಾಗಿ ಮಧ್ಯಂತರ ಚುನಾವಣೆ ನಡೆದರೆ ಬಿಜೆಪಿ ಅಧಿಕಾರ ಹಿಡಿಯುವುದರಲ್ಲಿ ಯಾವ ಅನುಮಾನವೂ ಇಲ್ಲ ಎಂದರು.
ಈಗಾಗಲೇ ಮತದಾರರು 5 ವರ್ಷಗಳ ಕಾಲ ಇರಬೇಕು ಎಂದು ಶಾಸಕರನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. 1 ವರ್ಷಕ್ಕೆ ಚುನಾವಣೆ ನಡೆಯುವುದು ಸರಿಯಲ್ಲ. ಸಿಎಂ ಕುಮಾರಸ್ವಾಮಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಜನಗಳ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಅವರ ಘನತೆಗೆ ತಕ್ಕನಾಗಿ ಮಾತನಾಡಬೇಕು ಎಂದು ನೇರವಾಗಿಯೇ ಕುಟುಕಿದರು.
ಜನರ ಕಣ್ಣೊರೆಸುವ ತಂತ್ರವಾಗಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ರಾಜ್ಯದ ಜನ ಭೀಕರ ಬರ, ಗುಳೆ, ನೀರಿನ ಕೊರತೆಯಂತಹ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿರುವಾಗ ಮುಖ್ಯಮಂತ್ರಿಗಳು ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ ಎಂದು ಮೂದಲಿಸಿದರು.