ದಾವಣಗೆರೆ:ಜಿಲ್ಲೆಯ ಏಳು ಮತ ಕ್ಷೇತ್ರಗಳ ಪೈಕಿ ಮೊದಲನೇಯ ಪಟ್ಟಿಯಲ್ಲಿ ಹೊನ್ನಾಳಿ, ಹರಿಹರ ಹಾಗು ಜಗಳೂರು ಕ್ಷೇತ್ರಗಳಿಗೆ ಬಿಜೆಪಿಯಿಂದ ಟಿಕೆಟ್ ಘೋಷಣೆ ಮಾಡಲಾಗಿತ್ತು. ಇಂದು ಅಚ್ಚರಿಯಂಬಂತೆ ಎರಡನೇ ಪಟ್ಟಿಯಲ್ಲಿ ಬಿಜೆಪಿ ಹೈಕಮಾಂಡ್ ಉಳಿದ ನಾಲ್ಕು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿ ಹಾಲಿ ಶಾಸಕರಿಗೆ ಶಾಕ್ ನೀಡಿದೆ.
ಎರಡನೇ ಪಟ್ಟಿಯಲ್ಲಿ ಬಿಜೆಪಿಯಿಂದ ದಾವಣಗೆರೆ ದಕ್ಷಿಣಕ್ಕೆ ಮಾಜಿ ಮೇಯರ್ ಬಿಜಿ ಅಜಯ್ ಕುಮಾರ್ ಹೊಸ ಮುಖಕ್ಕೆ ಮಣೆ ಹಾಕಿದ್ದು, ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಹಾಲಿ ಶಾಸಕ ಎಸ್ಎ ರವೀಂದ್ರನಾಥ್ ಬದಲಿಗೆ ಹೊಸ ಮುಖವಾದ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್ಗೆ ಟಿಕೆಟ್ ನೀಡಿದೆ. ಇನ್ನು ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಅಚ್ಚರಿಯಂತೆ ಮಾಡಾಳ್ ವಿರೂಪಾಕ್ಷಪ್ಪನವರ ಹಿರಿಯ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ ಬಿಜೆಪಿ ಚನ್ನಗಿರಿ ಕ್ಷೇತ್ರಕ್ಕೆ ಮಾಜಿ ತುಮ್ಕೋಸ್ ಅಧ್ಯಕ್ಷ ಹೆಚ್ಎಸ್ ಶಿವಕುಮಾರ್ ಅವರಿಗೆ ಟಿಕೆಟ್ ನೀಡಿದೆ. ಇದರಿಂದಾಗಿ ಮಾಡಾಳ್ ಕುಟುಂಬಕ್ಕೆ ಟಿಕೆಟ್ ಕೈತಪ್ಪಿದೆ. ಇನ್ನು ಮಾಯಕೊಂಡ ಕ್ಷೇತ್ರದಲ್ಲಿ ಹಾಲಿ ಶಾಸಕ ಪ್ರೋ ಲಿಂಗಣ್ಣನವರಿಗೂ ಟಿಕೆಟ್ ಕೈ ತಪ್ಪಿದ್ದು, ಇವರ ಬದಲಿಗೆ ಮಾಜಿ ಶಾಸಕ ಬಸವರಾಜ್ ನಾಯ್ಕ್ಗೆ ಟಿಕೆಟ್ ನೀಡಿ ಆಕಾಂಕ್ಷಿಗಳಿಗೆ ಟಕ್ಕರ್ ನೀಡಲಾಗಿದೆ.
ಓದಿ:ಬಿಜೆಪಿ 2ನೇ ಪಟ್ಟಿ ಬಿಡುಗಡೆ: ಏಳು ಶಾಸಕರ ಕೈ ತಪ್ಪಿದ ಟಿಕೆಟ್
ನಾಲ್ಕು ಕ್ಷೇತ್ರಗಳಲ್ಲಿ ಬದಲಾವಣೆ:ನಾಲ್ಕು ಮತ ಕ್ಷೇತ್ರಗಳನ್ನು ಪ್ರಮುಖವಾಗಿ ಗಮನಿಸುವುದಾದ್ರೆ ಇಲ್ಲಿ ದಾವಣಗೆರೆ ಉತ್ತರದಲ್ಲಿ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ವಿರುದ್ಧ ಹಾಲಿ ಶಾಸಕ ಎಸ್ ಎ ರವೀಂದ್ರನಾಥ್ ಬದಲಿಗೆ ಹೊಸ ಮುಖ ಲೋಕಿಕೆರೆ ನಾಗರಾಜ್ರನ್ನು ಕಣಕ್ಕಿಳಿಸಿ, ಲಿಂಗಾಯತ ಅಸ್ತ್ರ ಪ್ರಯೋಗಿಸಲಾಗಿದೆ. ಇನ್ನು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಹಾಲಿ ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನು ಕಟ್ಟಿಹಾಕಲು ಪಂಚಮಸಾಲಿ ಸಮುದಾಯದ ಮಾಜಿ ಮೇಯರ್ ಬಿ ಜಿ ಅಜಯ್ ಕುಮಾರ್ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ದಾವಣಗೆರೆ ದಕ್ಷಿಣ ಹಾಗು ಉತ್ತರದಲ್ಲಿ ಬಹುತೇಕ ಹೊಸಮುಖಗಳಿಗೆ ಬಿಜೆಪಿ ಮಣೆ ಹಾಕಿದೆ. ಇನ್ನು ಚನ್ನಗಿರಿ ಹೆಚ್ ಎಸ್ ಶಿವಕುಮಾರ್ ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದು, ಮಾಡಾಳ್ ಮಲ್ಲಿಕಾರ್ಜುನ್ ಟಿಕೆಟ್ ವಂಚಿತರಾಗಿದ್ದಾರೆ. ಮಾಯಕೊಂಡ ಕ್ಷೇತ್ರದಲ್ಲಿ 2008 ರಲ್ಲಿ ಶಾಸಕರಾಗಿದ್ದ ಬಸವರಾಜ್ ನಾಯ್ಕ್ಗೆ ಟಿಕೆಟ್ ಘೋಷಿಸಲಾಗಿದೆ.
ಕಾಂಗ್ರೆಸ್ನಿಂದ ದಾವಣಗೆರೆಯ ಮೂರು ಕ್ಷೇತ್ರಗಳು ಪೆಂಡಿಂಗ್: ದಾವಣಗೆರೆಯ ಬಹುತೇಕ ಏಳು ಕ್ಷೇತ್ರಗಳಿಗೆ ಬಿಜೆಪಿ ಹೈಕಮಾಂಡ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಇನ್ನು ಕಾಂಗ್ರೆಸ್ ಪಕ್ಷ ಈಗಾಗಲೇ ದಾವಣಗೆರೆ ಉತ್ತರ ದಕ್ಷಿಣ ಹಾಗು ಮಾಯಕೊಂಡ, ಚನ್ನಗಿರಿ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಉಳಿದ ಮೂರು ಕ್ಷೇತ್ರಗಳಾದ ಹರಿಹರ, ಜಗಳೂರು, ಹೊನ್ನಾಳಿ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯಲ್ಲಿ ಗೌಪ್ಯತೆ ಕಾಪಾಡಿಕೊಂಡಿದೆ.
ಓದಿ:ಕಾಂಗ್ರೆಸ್, ಜೆಡಿಎಸ್ ಗಿಂತ ಹೆಚ್ಚು ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಿದ ಬಿಜೆಪಿ.. 12 ಕ್ಷೇತ್ರ ಮಾತ್ರ ಬಾಕಿ..