ದಾವಣಗೆರೆ:ರಾಜ್ಯ ಕಾಂಗ್ರೆಸ್ ಸರ್ಕಾರ ರೈತರು ಮತ್ತು ಬಡವರ ವಿರೋಧಿಯಾಗಿದೆ. ಈ ಎಲ್ಲಾ ವಿಚಾರಗಳನ್ನು ಅಧಿವೇಶನದಲ್ಲಿ ಮುಂದಿಟ್ಟು ಸರ್ಕಾರದ ಸೊಕ್ಕು ಮುರಿಯುವ ಕೆಲಸ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗ ಗ್ರಾಮಕ್ಕೆ ಇಂದು ಆಗಮಿಸಿದ ವಿಜಯೇಂದ್ರ ಅವರಿಗೆ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಭರ್ಜರಿ ಸ್ವಾಗತ ಕೋರಲಾಯಿತು. ಬೃಹತ್ ಆಕಾರದ ಹೂವಿನ ಹಾರ ಹಾಕಿ, ಘೋಷಣೆಗಳನ್ನು ಕೂಗಲಾಯಿತು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ, ರಾಜ್ಯದಲ್ಲಿ ಭೀಕರ ಬರಗಾಲವಿದೆ. ಕಬ್ಬಿನ ಬೆಳೆಗಾರರ ಕೂಗಿಗೆ ಈ ಸರ್ಕಾರ ಕಿವಿ ಕೊಡ್ತಿಲ್ಲ, ಅದೇ ರೀತಿ ಉತ್ತರ ಕರ್ನಾಟಕದ ಅಭಿವೃದ್ಧಿಯನ್ನು ಮರೆತಿದೆ. ಶಾಸಕರಿಗೆ ಬಿಡುಗಡೆ ಆಗಬೇಕಾಗಿದ್ದ ಅನುದಾನ ಕೂಡ ಬಿಡುಗಡೆಯಾಗಿಲ್ಲ, ಇಲ್ಲಿಯತನಕ ಒಂದು ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಮೇಲ್ನೋಟಕ್ಕೆ ಇದು ರೈತ ವಿರೋಧಿ, ಬಡವರ ವಿರೋಧಿ ಸರ್ಕಾರ ಎಂದು ಗೊತ್ತಾಗುತ್ತಿದೆ ಎಂದರು.
ಕಾಲಿಗೆ ಚಕ್ರ ಕಟ್ಟಿಕೊಂಡು ತಂದೆಯಂತೆ ಪ್ರವಾಸ ಮಾಡುವೆ: ರಾಜ್ಯಾಧ್ಯಕ್ಷನಾಗಿ ಹಲವು ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಒಂದು ದಿನ ಕೂಡ ಮನೆಯಲ್ಲಿ ಕುಳಿತುಕೊಳ್ಳದೇ ರಾಜ್ಯದ ಪ್ರವಾಸ ಮಾಡು ಎಂದು ನಮ್ಮ ತಂದೆ ಕಿವಿಮಾತು ಹೇಳಿದ್ದಾರೆ. ಮೋದಿಯವರು ಮತ್ತೊಮ್ಮೆ ಪಿಎಂ ಆಗಬೇಕಿದೆ, ಅವರ ಕೈಯನ್ನು ಬಲಪಡಿಸಬೇಕೆಂದು ಪ್ರಜ್ಞಾವಂತರು ಯೋಚಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ದಾವಣಗೆರೆ ಪ್ರವಾಸ ಮಾಡಲಿದ್ದೇನೆ ಎಂದು ತಿಳಿಸಿದರು.
ನಮ್ಮ ಮುಂದಿನ ಗುರಿ 28 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು. ಬಿಎಸ್ವೈ ರೀತಿ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ಪ್ರವಾಸ ಮಾಡಿ ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತೇನೆ, ನೀವೆಲ್ಲಾ ನನಗೆ ಬೆಂಬಲ ಕೊಡಬೇಕಿದೆ ಎಂದು ಮನವಿ ಮಾಡಿದರು.