ದಾವಣಗೆರೆ :ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಕುಟುಂಬಕ್ಕೆ ಬಿಟ್ಟು ಅನ್ಯರಿಗೆ ಟಿಕೆಟ್ ಕೊಟ್ರೆ ಸರಿ ಇರಲ್ಲ. ತಳಮಟ್ಟದಿಂದ ಪಕ್ಷ ಕಟ್ಟಿದ್ದು ವಿರೂಪಾಕ್ಷಪ್ಪ ಅವರು. ಅವರು ಕಟ್ಟಿದ ಮನೆಯಲ್ಲಿ ಬೇರೆಯವರು ವಾಸ ಮಾಡಿದ್ರೆ ನಾವು ಸಹಿಸಲ್ಲ ಎಂದು ತುಂಬಿದ ಸಭೆಯಲ್ಲಿ ಮಾಡಾಳ್ ಬೆಂಬಲಗ ಹಾಗೂ ಸ್ಥಳೀಯ ಬಿಜೆಪಿ ಮುಖಂಡ ಉಮೇಶ್ ಆಕ್ರೋಶ ಹೊರಹಾಕಿದ್ರು. ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಬಿಟ್ಟು ಬೇರೆಯವರಿಗೆ ಟಿಕೆಟ್ ಕೊಟ್ಟರೆ ಬಿಜೆಪಿ ಕೇವಲ ಎರಡ್ಮೂರು ಸಾವಿರ ಮತಗಳನ್ನು ಪಡೆಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಕಳೆದ ದಿನ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪರ ಅವರು ಬ್ಯಾಟ್ ಬೀಸಿದರು. ಕಳೆದ ದಿನ ಚನ್ನಗಿರಿಯಲ್ಲಿ ನಡೆದ ವಿಜಯ ಸಂಕಲ್ಪಯಾತ್ರೆ ಪೂರ್ವಾಭಾವಿ ಸಭೆಯಲ್ಲಿ ಕಾರ್ಯಕರ್ತರಿಂದ ಮಾಡಾಳ್ ಕುಟುಂಬಕ್ಕೆ ಟಿಕೆಟ್ ನೀಡಬೇಕು ಎಂಬ ಒತ್ತಾಯ ಕೇಳಿಬಂತು.
ವಿಜಯ ಸಂಕಲ್ಪ ಯಾತ್ರೆಗೆ ಮಾಡಾಳ್ ವಿರೂಪಾಕ್ಷಪ್ಪ ಸೇರಿದಂತೆ ಅವರ ಕುಟುಂಬಸ್ಥರು ಭಾಗವಹಿಸಬೇಕು. ಇಲ್ಲವಾದರೆ ನಾವು ಯಾರೂ ಕೂಡಾ ವಿಜಯಸಂಕಲ್ಪ ಯಾತ್ರೆಗೆ ಹೋಗುವುದಿಲ್ಲ. ಲೋಕಾಯುಕ್ತ ದಾಳಿ ಪ್ರಕರಣದಲ್ಲಿ A1 ಆರೋಪಿಯಾಗಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರಿಗೆ ಟಿಕೆಟ್ ಕೊಡ್ಬೇಕು. ಇದು ಎಚ್ಚರಿಕೆ ಅಂತಾದರೂ ತಿಳಿದುಕೊಳ್ಳಿ, ಇಲ್ಲ ಸಲಹೆ ಅಥವಾ ಬೇಡಿಕೆ ಎಂದಾದರೂ ಬಿಜೆಪಿಯ ವರಿಷ್ಠರು ತಿಳಿದುಕೊಳ್ಳಬೇಕು ಎಂದು ಬಹಿರಂಗವಾಗಿಯೇ ಉಮೇಶ್ ಹೇಳಿದ್ದಾರೆ.
ಇದನ್ನೂ ಓದಿ :ಬೊಮ್ಮಾಯಿ ಕಟ್ಟಿ ಹಾಕಲು ಕಾಂಗ್ರೆಸ್ ಕಾರ್ಯತಂತ್ರ; ಶಿಗ್ಗಾಂವಿಯಿಂದ ವಿನಯ್ ಕುಲಕರ್ಣಿ ಕಣಕ್ಕೆ?
ಇದೇ 19 ರಂದು ನಡೆಯಲಿದೆ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ:ಇದೇ ತಿಂಗಳು 19 ರಂದು ಹಮ್ಮಿಕೊಂಡಿರುವ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾಡಾಳ್ ಕುಟುಂಬಸ್ಥರಿಗೆ ಅವಕಾಶ ನೀಡಬೇಕು. ಇಲ್ಲವಾದರೆ ನಾವು ಯಾರೂ ಕೂಡ ಪಾಲ್ಗೊಳ್ಳುವುದಿಲ್ಲ ಎಂದು ಕಾರ್ಯಕರ್ತರು ಪಟ್ಟು ಹಿಡಿದರು.