ದಾವಣಗೆರೆ :ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಗಳಿಗೆ ಟಿಕೆಟ್ ನೀಡಲು ಕಾರ್ಯಕರ್ತರಿಂದ ಅಭಿಪ್ರಾಯವನ್ನು ದಾವಣಗೆರೆಯಲ್ಲಿ ಸಂಗ್ರಹಿಸಲಾಗಿದೆ. ಶುಕ್ರವಾರ ಜಿಲ್ಲೆಯ ವಿನೋಭ ನಗರದಲ್ಲಿ ಇರುವ ದಾವಣಗೆರೆ ಅರ್ಬನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಾಕಷ್ಟು ಕಾರ್ಯಕರ್ತರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ತಮ್ಮ ಆಕಾಂಕ್ಷಿಗಳಿಗೆ ಟಿಕೆಟ್ ನೀಡಬೇಕೆಂದು ತಮ್ಮ ನಾಯಕರ ಪರ ಬ್ಯಾಲೆಟ್ ಪೇಪರ್ನಲ್ಲಿ ಮತ ಚಲಾಯಿಸಿದರು.
ಏಳು ಮತಕ್ಷೇತ್ರಗಳ ಮಾಹಿತಿ ಸಂಗ್ರಹ :ದಾವಣಗೆರೆ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಬಗ್ಗೆ ಈ ಸಭೆಯಲ್ಲಿ ಅಭಿಪ್ರಾಯ ಸಂಗ್ರಹಿಸಲಾಯಿತು. ಮೊದಲಿಗೆ ದಾವಣಗೆರೆ ದಕ್ಷಿಣ, ದಾವಣಗೆರೆ ಉತ್ತರ, ಹರಿಹರ ಹೀಗೆ ಏಳು ಕ್ಷೇತ್ರಗಳ ಕಾರ್ಯಕರ್ತರ ನಾಡಿ ಮಿಡಿತವನ್ನು ಆಲಿಸಲಾಯಿತು. ಕಾರ್ಯಕರ್ತರ ಅಭಿಪ್ರಾಯ ಪಡೆಯುವ ಉಸ್ತುವಾರಿಯಾಗಿ ದಾವಣಗೆರೆಗೆ ಆಗಮಿಸಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾರ್ಯರ್ತರ ಕಡೆಯಿಂದ ಬ್ಯಾಲೆಟ್ ಮತಗಳ ಮೂಲಕ ಮಾಹಿತಿ ಕಲೆ ಹಾಕಿ ಅದನ್ನು ಬೆಂಗಳೂರಿಗೆ ರವಾನೆ ಮಾಡಲಾಗುವುದೆಂದು ಮಾಹಿತಿ ನೀಡಿದರು. ಹಾಲಿ ಏಳು ವಿಧಾಸಭಾ ಕ್ಷೇತ್ರಗಳ ಪೈಕಿ 2018 ರಲ್ಲಿ ಐದು ಸ್ಥಾನ ಗೆದ್ದ ಬಿಜೆಪಿ ಟಿಕೆಟ್ ಗಾಗಿ ಬಹುತೇಕ ಕಡೆ ಹೊಸ ಮುಖ ಹಾಗೂ ಯುವಕರು ಮುಂದೆ ಇರುವುದ್ದರಿಂದ 36 ಜನ ಟಿಕೆಟ್ ಆಕಾಂಕ್ಷಿಗಳು ಸಭೆಯಲ್ಲಿ ಭಾಗಿಯಾಗಿದರು.
ಹಾಲಿ ಶಾಸಕರರಲ್ಲಿ ಬಹುತೇಕರಿಗೆ ಟಿಕೆಟ್ ಸಿಗುವುದು ಖಚಿತ :ಹಾಲಿ ಶಾಸಕರರಲ್ಲಿ ಬಹುತೇಕರಿಗೆ ಟಿಕೆಟ್ ಸಿಗುವುದು ಖಚಿತವಾಗಿದೆ ಎಂದು ಬಿಜೆಪಿ ಮೂಲಗಳಿಂದ ವಿಚಾರ ಕೇಳಿ ಬರುತ್ತಿದೆ. ಅದರೇ ದಾವಣಗೆರೆ ಉತ್ತರ ಕ್ಷೇತ್ರದಿಂದ ಶಾಸಕ ಎಸ್ ಎ ರವೀಂದ್ರನಾಥ ಸ್ವರ್ಧೆಗೆ ಹಿಂದೇಟು ಹಾಕುತ್ತಿರುವುದರಿಂದ ಆಕಾಂಕ್ಷಿಗಳು ಹುಟ್ಟಿಕೊಳ್ಳುವಂತಾಗಿದೆ. ಇನ್ನು ಪಕ್ಷದ ಸಂಘಟನೆಯಲ್ಲಿ ದಾವಣಗೆರೆ ಮೂಲ ಶಕ್ತಿ ಕೇಂದ್ರವಾಗಿದ್ದು, ಮೂಲ ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರ ಹಾಗೂ ಮಂಡಲಗಳ ಹೀಗೆ ಮೂರು ಘಟಕಗಳಿಂದ ಚುನಾವಣಾ ಅಭ್ಯರ್ಥಿ ಕುರಿತು ಮಾಹಿತಿ ಸಂಗ್ರಹಕ್ಕೆ ಬಿಜೆಪಿ ಮುಂದಾಗಿದೆ.
ಪ್ರತಿ ವಿಧಾನಸಭಾ ಕೇಂದ್ರಗಳಲ್ಲಿ ಸುಮಾರು 250 ಜನರ ಶಕ್ತಿ ಕೇಂದ್ರ, ಮಹಾ ಶಕ್ತಿ ಕೇಂದ್ರ ಹಾಗೂ ಮಂಡಳದ ಸದಸ್ಯರನ್ನು ಮಾಡಲಾಗಿದ್ದು, ಮೂರು ಘಟಕಗಳಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಟಿಕೆಟ್ ನೀಡಲು ಈ ಪ್ರಮುಖರ ಅಭಿಪ್ರಾಯವೂ ಒಂದು ಮಾನದಂಡವಾಗಿದೆ. ಜೊತೆಗೆ ಮೂರು ಸುತ್ತಿನ ಸರ್ವೇ ಇದ್ದಂತೆ, ಈ ಎಲ್ಲ ಮಾನದಂಡಗಳನ್ನು ಪರಿಗಣಿಸಿ ಬಿಜೆಪಿ ಪಾರ್ಲಿಮೆಂಟರಿ ಸಮಿತಿ ಟಿಕೆಟ್ ಫೈನಲ್ ಮಾಡುವುದು ಪ್ರಮುಖ ನಡೆಯಾಗಿದೆ.
ಈ ಕುರಿತು ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, ಬಿಜೆಪಿ ಪಾರ್ಟಿಯಿಂದ ಒಂದು ಜಿಲ್ಲೆಯಲ್ಲಿ ಇಬ್ಬರು ನಾಯಕರು ಭೇಟಿ ನೀಡಿ ಕಾರ್ಯಕರ್ತರ ಅಭಿಪ್ರಾಯ ಕಲೆ ಹಾಕಲಾಗುತ್ತಿದೆ. ಈಗಾಗಾಲೇ ಸಾಕಷ್ಟು ಜಿಲ್ಲೆಗಳಲ್ಲೂ ಸಭೆಗೆ ಭೇಟಿ ನೀಡಿ ಕಾರ್ಯಕರ್ತರಿಂದ ಆಯಾ ಆಕಾಂಕ್ಷಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದೇವೆ. ಇದರಂತೆ ಇಂದು ದಾವಣಗೆರೆಯಲ್ಲೂ ಕೂಡ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ಅದನ್ನು ಬೆಂಗಳೂರಿಗೆ ಮುಟ್ಟಿಸಲಾಗುವುದು ಎಂದು ತಿಳಿಸಿದರು.