ದಾವಣಗೆರೆ: ನಾವು ಕಾಂಗ್ರೆಸ್ನಲ್ಲಿರುವ ಸ್ಥಳೀಯ ಸಂಸ್ಥೆ ಜನಪ್ರತಿನಿಧಿಗಳನ್ನು ಸೆಳೆಯುತ್ತೇವೆ ಎಂದು ನಗರಾಭಿವೃದ್ಧಿ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಿಜೆಪಿಯವರನ್ನು ಸೆಳೆಯಲು ಆಹ್ವಾನ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಟಾಂಗ್ ನೀಡಿದ್ದಾರೆ.
ಜಿಲ್ಲೆಯ ಜಗಳೂರು ತಾಲೂಕಿನ ಪಲ್ಲಾಗಟ್ಟೆ ಗ್ರಾಮದಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರು ಬಿಜೆಪಿಯವರನ್ನು ಸೆಳೆಯಲು ಆಹ್ವಾನ ನೀಡಿದ್ದಾರೆ. ಹಾಗಾಗಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯಲ್ಲಿ ನಾವು ಕಾಂಗ್ರೆಸ್ಸಿಗರನ್ನು ಸೆಳೆಯುತ್ತೇವೆ ಎನ್ನುವ ಮೂಲಕ ಸ್ಥಳೀಯ ಮಟ್ಟದಲ್ಲೂ ಆಪರೇಷನ್ ಕಮಲದ ಸುಳಿವನ್ನು ನೀಡಿದ್ರು. ಬಿಜೆಪಿಯಲ್ಲಿ ನಾವು 17 ಶಾಸಕರು ಸಂತೋಷದಿಂದ ನೆಮ್ಮದಿಯಾಗಿದ್ದೇವೆ. ಕಮಲದ ಚಿಹ್ನೆಯಡಿ ಬಂದ ನಾವು ನೆಮ್ಮದಿಯಾಗಿ ಆಯಾ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರು.