ದಾವಣಗೆರೆ: ಮಳೆಗಾಲದ ಹಂಗಾಮಿನ ಬೆಳೆ ಬೆಳೆಯಲು ಭದ್ರಾ ಬಲದಂಡೆ ಕಾಲುವೆಗೆ ಈಗಾಗಲೇ ಆಗಸ್ಟ್ 10ರಿಂದ ನೀರು ಹರಿಸಲಾಗುತ್ತಿದೆ. ಭದ್ರಾ ನೀರಿನ ಮಟ್ಟ ಇಂದು 166.9 ಅಡಿ ಇದ್ದು, 170 ಅಡಿಗೆ ನೀರು ತಲುಪಿದರೆ ಕಾಲುವೆಗಳಿಗೆ ಸಂಪೂರ್ಣವಾಗಿ ನೀರು ಹರಿಸಲು ಸಮಸ್ಯೆ ಆಗುವುದಿಲ್ಲ ಎಂದು ಚೆನ್ನಗಿರಿ ಶಾಸಕ ಬಸವರಾಜು ವಿ.ಶಿವಗಂಗಾ ತಿಳಿಸಿದರು.
ಈ ಕುರಿತು ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಜಲಾಶಯದಲ್ಲಿ ನೀರು ಇರುವುದರಿಂದ ಬೆಳೆ ಬೆಳೆಯಲು ರೈತರಿಗೆ ಯಾವುದೇ ಸಮಸ್ಯೆ ಆಗದು. ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ಕೂಡ ಮಾಡಲಾಗಿದೆ. ಕಾಲುವೆಗೆ ಹರಿಯುತ್ತಿರುವ ನೀರು ನಿಲ್ಲಿಸುವ ಕುರಿತು ಸರ್ಕಾರದ ಯಾವುದೇ ಪ್ರಸ್ತಾಪ ಬಂದಿಲ್ಲ. ಹಾಗಾಗಿ ರೈತರು ಆತಂಕ ಪಡಬೇಕಾಗಿಲ್ಲ. ರೈತರಿಗೆ ತೊಂದರೆಯಾಗಲು ನಾನು ಬಿಡುವುದಿಲ್ಲ ಎಂದರು.
ಭದ್ರಾ ಜಲಾಶಯಕ್ಕೆ 170 ಅಡಿ ನೀರು ಸಂಗ್ರಹವಾದರೆ 100 ದಿನಗಳಿಗೂ ಹೆಚ್ಚು ನೀರು ಹರಿಸಬಹುದು. ಮಲೆನಾಡು ಭಾಗದಲ್ಲಿ ಸ್ವಲ್ಪ ಮಳೆ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಒಳಹರಿವು ಸ್ವಲ್ಪ ಕಡಿಮೆಯಾಗಿದೆ. ಆದರೂ ಸಹ ರೈತರ ಜಮೀನುಗಳಿಗೆ ನೀರು ಹರಿಸಲು ಯಾವುದೇ ಸಮಸ್ಯೆ ಇಲ್ಲ. ಮುಂದಿನ ದಿನಗಳಲ್ಲಿ ಮಳೆಯಾಗುವು ಸಾಧ್ಯತೆಯಿದೆ. ಕೆಲವರು ರೈತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅಂಥವರ ಮಾತಿಗೆ ರೈತರು ಕಿವಿಗೊಡಬಾರದು.
ಇದನ್ನೂ ಓದಿ:ಕೇಂದ್ರದ 5 ಕೆಜಿ ಅಕ್ಕಿ ಯುಪಿಎ ಸರ್ಕಾರದ ಕೊಡುಗೆ, ಮೋದಿ ಅವರದ್ದಲ್ಲ: ಸಚಿವ ಸಂತೋಷ್ ಲಾಡ್