ದಾವಣಗೆರೆ : ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆ ಘೋಷಣೆಯಾಗಿ ನಾಲ್ಕು ವರ್ಷವಾದರೂ ಕೇವಲ 5.88 ಕೋಟಿ ರೂಪಾಯಿ ವೆಚ್ಚ 12 ಕಾಮಗಾರಿಗಳು ಮಾತ್ರ ನಡೆದಿವೆ. ಇನ್ನು ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡಲು ಮತ್ತು ಪರಿಸರ ಮಾಲಿನ್ಯ ಪ್ರಮಾಣ ಕಡಿಮೆ ಮಾಡುವ ಸಲುವಾಗಿ ಆಧುನಿಕ ತಂತ್ರಜ್ಞಾನವುಳ್ಳ ಬ್ಯಾಟರಿ ಚಾಲಿತ ಇ -ಆಟೋಗಳನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ.
ಮೊದಲ ಹಂತದಲ್ಲಿ 20 ಇ - ಆಟೋಗಳನ್ನು ಫಲಾನುಭವಿಗಳಿಗೆ ವಿತರಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ 36 ಲಕ್ಷ ರೂಪಾಯಿ ಮೀಸಲಿಡಲಾಗಿದೆ. ಶೇಕಡಾ 60 ರಷ್ಟು ಸಬ್ಸಿಡಿಯನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ನೀಡಲಾಗುತ್ತಿದೆ. ಉಳಿದ ಹಣಕ್ಕೆ ಸಾಲ ಸೌಲಭ್ಯ ನೀಡಲಾಗುವುದು. ಹೆಣ್ಣುಮಕ್ಕಳಿಗೆ ಶೇಕಡಾ 75 ರಷ್ಟು ಸಬ್ಸಿಡಿ ನೀಡಲಾಗುವುದು.
ಬ್ಯಾಟರಿ ಚಾಲಿತ ಇ -ಆಟೋ, ಬೈಸಿಕಲ್ ರೈಲು ನಿಲ್ದಾಣ, ಬಸ್ ನಿಲ್ದಾಣದಿಂದ ಮಹಿಳಾ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಪಿಂಕ್ ಇ ಆಟೋ ಸೇವೆ ಪ್ರಾರಂಭಿಸಲು ಮುಂದೆ ಬಂದರೆ ಸ್ತ್ರೀಯರಿಗೆ ಅವಕಾಶ ಮಾಡಿಕೊಡಲಾಗುವುದು. ಒಮ್ಮೆ ಬ್ಯಾಟರಿ ಚಾರ್ಜ್ ಮಾಡಿದರೆ 60 ರಿಂದ 70 ಕಿಲೋಮೀಟರ್ ದೂರ ಚಲಾಯಿಸಬಹುದು. ಗರಿಷ್ಠ 30 ಕಿಲೋಮೀಟರ್ ವೇಗದಲ್ಲಿ ಇದು ಸಂಚರಿಸಲಿದೆ ಎಂದು ಸ್ಮಾರ್ಟ್ ಸಿಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಆಶಾದ್ ಷರೀಫ್ ಹೇಳಿದ್ದಾರೆ.
ಯೋಜನೆ ವಿಳಂಬವಾಗಿದ್ದಕ್ಕೆ ತಾಂತ್ರಿಕ ಕಾರಣಗಳತ್ತ ಬೊಟ್ಟು ಮಾಡಲಾಗಿದೆ. ಇದೀಗ ಕಾಮಗಾರಿಗಳು ಚುರುಕುಗೊಂಡಿದ್ದು, ಸ್ಮಾರ್ಟ್ ಸಿಟಿ ಯೋಜನೆಯಡಿ ದಾವಣಗೆರೆಯಲ್ಲಿ 549 ಕೋಟಿ ರೂಪಾಯಿ ವೆಚ್ಚದಲ್ಲಿ 41 ಕಾಮಗಾರಿಗಳು ಪ್ರಗತಿಯಲ್ಲಿದ್ದು, 161 ಕೋಟಿ ರೂಪಾಯಿ ವೆಚ್ಚದ 9 ಕಾಮಗಾರಿಗಳು ಟೆಂಡರ್ ಹಂತದಲ್ಲಿರುವುದಾಗಿ ಹೇಳಿದರು. ಈ ಯೋಜನೆಯಡಿ ನಗರದ ಜನತೆಗೆ ಅನುಕೂಲವಾಗುವ ಉದ್ದೇಶದಿಂದ ನಗರದಲ್ಲಿ ಸ್ಮಾರ್ಟ್ ಶೌಚಾಲಯ, ಸ್ಮಾರ್ಟ್ ಬಸ್ ಶೆಲ್ಟರ್, ಇ ರಿಕ್ಷಾ ಸೇವೆ, ಹಳೇ ಬಸ್ ನಿಲ್ದಾಣ ಅಭಿವೃದ್ಧಿ, ಬೈಸಿಕಲ್ ಷೇರಿಂಗ್ ಸಿಸ್ಟಮ್, ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಅಭಿವೃದ್ಧಿ, ಸ್ಮಾರ್ಟ್ ರಸ್ತೆ ಹಾಗೂ ಶಾಲೆಗಳು ಸೇರಿದಂತೆ ಹಲವಾರು ಯೋಜನೆಗಳನ್ನು ಹಾಕಿಕೊಂಡಿರುವುದಾಗಿ ಮಾಹಿತಿ ನೀಡಿದರು.