ದಾವಣಗೆರೆ: ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡ ಬಳಿಕ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಹಾವೇರಿ ಸಂಸದ ಶಿವಕುಮಾರ್ ಉದಾಸಿ ಒಂದೇ ಕಾರಿನಲ್ಲಿ ಪ್ರಯಾಣಿಸುವ ಮೂಲಕ ಅಚ್ಚರಿ ಮೂಡಿಸಿದರು.
ಒಂದೇ ಕಾರಿನಲ್ಲಿ ಪ್ರಯಾಣಿಸಿದ ಬೊಮ್ಮಾಯಿ, ಡಿಸಿಎಂ, ಉದಾಸಿ ಶಾಸಕರಾದ ಉಮೇಶ್ ಕತ್ತಿ, ಬಸನಗೌಡ ಪಾಟೀಲ್ ಯತ್ನಾಳ್, ಮುರುಗೇಶ್ ನಿರಾಣಿ ಎರಡು ಬಾರಿ ಸಭೆ ನಡೆಸಿದ್ದಾರೆ ಎನ್ನಲಾದ ವಿಚಾರ ಭುಗಿಲೇಳುತ್ತಿದ್ದಂತೆ ಈ ಮೂವರು ನಾಯಕರು ರಹಸ್ಯವಾಗಿ ಹೋಗಿ ಬಂದಿದ್ದು ಎಲ್ಲಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಮೂಲಕ ತೆರಳಿದ್ದು ಎಲ್ಲಿಗೆ ಎಂಬ ಪ್ರಶ್ನೆ ಹುಟ್ಟುಕೊಂಡಿದೆ.
ಕಳೆದ ಎರಡು ದಿನಗಳ ಹಿಂದೆಯಷ್ಟೇ ಲಕ್ಷ್ಮಣ ಸವದಿ ದಾವಣಗೆರೆಗೆ ಆಗಮಿಸಿದ್ದರು. ಆದ್ರೆ ಮತ್ತೆ ಬಂದಿದ್ದು ಯಾಕೆ ಅನ್ನೋದಕ್ಕೆ ಉತ್ತರ ಸಿಕ್ಕಿಲ್ಲ. ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ನಾಯಕರ ಪ್ರಯಾಣ ಕುತೂಹಲಕ್ಕೆ ಕಾರಣವಾಗಿದೆ.
ಸರ್ಕ್ಯೂಟ್ ಹೌಸ್ ಬಳಿ ಬಿಜೆಪಿ ಶಾಸಕರ ಭಿನ್ನಮತದ ಬಗ್ಗೆ ಪ್ರತಿಕ್ರಿಯೆ ನೀಡಲು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ನಿರಾಕರಿಸಿದರು. ರಾಜಕೀಯ ವಿಚಾರವಾಗಿ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಕಾರಿನ ಗ್ಲಾಸ್ ಏರಿಸಿ ಹೊರಟರು. ಕಾರಿನ ಹಿಂಬದಿ ಕುಳಿತಿದ್ದ ಡಿಸಿಎಂ ಲಕ್ಷ್ಮಣ ಸವದಿ, ಶಿವಕುಮಾರ್ ಉದಾಸಿ ಕೂಡ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.