ಕರ್ನಾಟಕ

karnataka

ETV Bharat / state

ಶಕ್ತಿ ಯೋಜನೆ ಎಫೆಕ್ಟ್, ಸಂಕಷ್ಟದಲ್ಲಿ ಆಟೋ ಚಾಲಕರು: ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ - ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್ ಎಸ್​ ಮಲ್ಲಿಕಾರ್ಜುನ್

ದಾವಣಗೆರೆಯಲ್ಲಿ ಶಕ್ತಿ ಯೋಜನೆ ವಿರುದ್ದ ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಕ್ತಿ ಯೋಜನೆ ವಿರುದ್ಧ ಪ್ರತಿಭಟಿಸಿದ ಆಟೋ ಚಾಲಕರು
ಶಕ್ತಿ ಯೋಜನೆ ವಿರುದ್ಧ ಪ್ರತಿಭಟಿಸಿದ ಆಟೋ ಚಾಲಕರು

By

Published : Jul 3, 2023, 6:35 PM IST

ಶಕ್ತಿ ಯೋಜನೆ ವಿರುದ್ಧ ಪ್ರತಿಭಟಿಸಿದ ಆಟೋ ಚಾಲಕರು

ದಾವಣಗೆರೆ :ರಾಜ್ಯಾದ್ಯಂತಶಕ್ತಿ ಯೋಜನೆ ಜಾರಿಗೆ ಬಂದಿರುವುದರಿಂದ ಪ್ರಯಾಣಕ್ಕೆ ಮಹಿಳೆಯರು ಸರ್ಕಾರಿ ಸಾರಿಗೆ ಬಸ್ ಅವಲಂಬಿಸಿದ್ದಾರೆ. ಇದರಿಂದಾಗಿ ಆಟೋ ಚಾಲಕರು ಹಾಗೂ ಖಾಸಗಿ ಬಸ್ ಮಾಲೀಕರು ಪ್ರಯಾಣಿಕರಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

ನಗರ ಸಾರಿಗೆ ಸರ್ಕಾರಿ ಬಸ್​ಗಳಲ್ಲಿ ಉಚಿತ ಪ್ರಯಾಣ ಇರುವುದರಿಂದ ದಾವಣಗೆರೆ ನಗರದ ಆಟೋ ಚಾಲಕರ ವಿರೋಧಕ್ಕೆ ಕಾರಣವಾಗಿದೆ. ಹೀಗಾಗಿ ದಾವಣಗೆರೆಯಲ್ಲಿ ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶ್ರೀ ಕೃಷ್ಣಸಾರಥಿ ಆಟೋ ಚಾಲಕರ ಹಾಗೂ ಮಾಲೀಕರ ಸಂಘದಿಂದ ದಾವಣಗೆರೆ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಬಳಿಕ ಹೈಸ್ಕೂಲ್ ಮೈದಾನದಿಂದ ಡಿಸಿ ಕಚೇರಿವರೆಗೆ ರ್‍ಯಾಲಿ ನಡೆಸಿದರು. ಉಚಿತ ಬಸ್ ಪ್ರಯಾಣದಿಂದ ಆಟೋ ಚಾಲಕರಿಗೆ ಸಂಕಷ್ಟ ಎದುರಾಗಿದೆ. ಮಹಿಳೆಯರು ಆಟೋವನ್ನೇ ಹತ್ತುತ್ತಿಲ್ಲ. ರಾಜ್ಯ ಸರ್ಕಾರ ಆಟೋ ಚಾಲಕರ ನೆರವಿಗೆ ಧಾವಿಸುವಂತೆ ಆಗ್ರಹಪಡಿಸಿದರು.

ಆಟೋ ಚಾಲಕರಿಗೆ ನಿವೇಶನ ನೀಡಬೇಕು. ಬಜೆಟ್​ನಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ದಾವಣಗೆರೆ ನಗರದಲ್ಲಿ ನಗರ ಸಾರಿಗೆ ಬಸ್​ಗಳ ಸೌಲಭ್ಯ ಇರುವ ಕಾರಣ ಮಹಿಳೆಯರು ಆಟೋ ಹತ್ತದೇ ಉಚಿತ ಬಸ್ ಪ್ರಯಾಣ ಮಾಡುತ್ತಿರುವುದರಿಂದ‌ ಆಟೋ ಚಾಲಕರಿಗೆ ದುಡಿಮೆ ಇಲ್ಲದಂತೆ ಆಗಿದೆ ಎಂದಿದ್ದಾರೆ.

ಶಕ್ತಿ ಯೋಜನೆ ವಿರುದ್ಧ ಆಟೋ ಚಾಲಕರ ಆಕ್ರೋಶ : ದಾವಣಗೆರೆಯಲ್ಲಿ ಉಸ್ತುವಾರಿ ಸಚಿವ ಹಾಗೂ ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್ ಎಸ್​ ಮಲ್ಲಿಕಾರ್ಜುನ್ ಅವರು ಕೆಎಸ್ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಚಲಾಯಿಸಿ ಶಕ್ತಿ ಯೋಜನೆಗೆ ಚಾಲನೆ ನೀಡಿದ್ದರು. ಬಸ್​ನಲ್ಲಿ ಫ್ರೀ ಟಿಕೆಟ್ ನೀಡುವ ಮುಖೇನಾ ಯೋಜನೆಗೆ ಚಾಲನೆ ದೊರೆತಿತ್ತು. ಶಕ್ತಿಯೋಜನೆ ಜಾರಿಯಿಂದ ಮಹಿಳಾ ಮಣಿಗಳು ಕಾರ್ಯಕ್ರಮದಲ್ಲೇ ಹರ್ಷ ವ್ಯಕ್ತಪಡಿಸಿದ್ದರು.

ಇನ್ನು ಕೆಲ ಮಹಿಳೆಯರು ನಗರ ಸಾರಿಗೆ ಬಸ್​ನಲ್ಲಿ ಉಚಿತ ಟಿಕೆಟ್ ಪಡೆದು ಪ್ರಯಾಣ ಮಾಡಿ ಒಳ್ಳೆಯ ಯೋಜನೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದರು. ಆದರೆ, ಯೋಜನೆ ಜಾರಿಗೆ ಬರುವ ಮುನ್ನವೇ ಆಟೋ ಚಾಲಕರು, ಖಾಸಗಿ ಬಸ್​ ಮಾಲೀಕರು ವಿರೋಧಿಸಿ ಪ್ರತಿಭಟಿಸಿದ್ದರು.

ಶಕ್ತಿ ಯೋಜನೆ ವಿರೋಧಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ :ಇನ್ನೊಂದೆಡೆ ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ ನೀಡಿದ ಘೋಷಣೆಯಂತೆ ಉಚಿತ ಪ್ರಯಾಣಕ್ಕಾಗಿ ಶಕ್ತಿ ಯೋಜನೆ ಜಾರಿಗೊಳಿಸಿದೆ. ಇದೀಗ ರಾಜ್ಯ ಸರ್ಕಾರ ಜಾರಿ ಮಾಡಿರುವ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಯನ್ನು ವಿರೋಧಿಸಿ ನಗರದಲ್ಲಿ ಬುಧವಾರ (ಜೂನ್ 29-2023) ರಂದು ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ತಮ್ಮ ಅಸಮಾಧಾನ ಹೊರಹಾಕಿದ್ದರು.

ಶಕ್ತಿ ವಿರೋಧಕ್ಕೆ ಕಾರಣ ಏನು? :ರಾಜ್ಯ ಸರ್ಕಾರ ಶಕ್ತಿ ಯೋಜನೆ ಘೋಷಣೆ ಮಾಡಿದ ಬಳಿಕ ಸಾರಿಗೆ ವಾಹನಗಳಲ್ಲಿ ಮಹಿಳೆಯರ ಪ್ರಯಾಣ ಹೆಚ್ಚಳವಾಗಿದೆ. ಇದು ಶಾಲಾ - ಕಾಲೇಜುಗಳ ಮೇಲೂ ಪರಿಣಾಮ ಬೀರಿದೆ. ಸಾರಿಗೆ ವಾಹನಗಳ ಕೊರತೆಯ ಸಮಸ್ಯೆ ಅಧಿಕವಾಗಿದೆ. ಗ್ರಾಮೀಣ ಭಾಗದ ಶಾಲಾ-ಕಾಲೇಜಿನ ಮಕ್ಕಳು ನಿತ್ಯ ನಗರಕ್ಕೆ ಆಗಮಿಸುತ್ತಿದ್ದು, ಸಕಾಲಕ್ಕೆ ಬರಲಾಗದೇ ತೀವ್ರ ಸಮಸ್ಯೆಯಾಗಿದೆ ಎಂದು ಆರೋಪಿಸಿ ಎಬಿವಿಪಿ ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದ್ದರು.

ಇದನ್ನೂ ಓದಿ: 'ಶಕ್ತಿ ಯೋಜನೆ' ವಿರೋಧಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ - ವಿಡಿಯೋ

ABOUT THE AUTHOR

...view details