ದಾವಣಗೆರೆ:ಪೊಲೀಸರನ್ನು ನೋಡಿ ಕದ್ದ ಬೊಲೆರೊ ಪಿಕ್ ಅಪ್ ವಾಹನದ ಸಮೇತ ಪರಾರಿಯಾಗಲು ಯತ್ನಿಸಿದ ಖದೀಮರನ್ನು ನ್ಯಾಮತಿ ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ. ಖಚಿತ ಮಾಹಿತಿ ಆಧಾರದ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗ ವೃತ್ತದ ಬಳಿ ಕಳ್ಳರನ್ನು ಕೆಡ್ಡಾಗೆ ಕೆಡವಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಮೂಲದ ಶಕೀಲ್ ಅಹಮ್ಮದ್ (27), ಫೈರೋಜ್ (20), ಇಮಾನ್ ಷರೀಪ್ ಅಲಿಯಾಸ್ ಕೀಲಿ ಇಮಾನ್(35), ಸೈಯದ್ ಸಾಧೀಕ್(23), ವಾಸೀಂ(19) ಬಂಧಿತ ಆರೋಪಿಗಳು.
ಕೆಲ ದಿನಗಳ ಹಿಂದೆ ಅಡಿಕೆ ಸಾಗಿಸುತ್ತಿದ್ದ ಬೊಲೆರೊ ಪಿಕ್ ಅಪ್ ಗೂಡ್ಸ್ ವಾಹನವನ್ನು ಅಡ್ಡಗಟ್ಟಿ ವಾಹನದೊಂದಿಗೆ ಪರಾರಿಯಾಗಿದ್ದರು. ಈ ಕುರಿತು ವಾಹನದ ಮಾಲೀಕ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಕೇಸ್ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದರು.
ಪೊಲೀಸರನ್ನು ನೋಡಿ ವಾಹನದ ಸಮೇತ ಪರಾರಿಯಾಗಲು ಯತ್ನ:ಖಚಿತ ಮಾಹಿತಿ ಆಧಾರದ ಮೇಲೆ ಸವಳಂಗ ಕ್ರಾಸ್ ಬಳಿ ಪೊಲೀಸರು ತಪಾಸಣೆ ನಡೆಸುತ್ತಿದ್ದರು. ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸರನ್ನು ನೋಡಿದ ಆರೋಪಿಗಳು ಏಕಾಏಕಿ ಬೊಲೆರೋ ಪಿಕಪ್ ವಾಹನ ತಿರುಗಿಸಿ, ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಆರೋಪಿಗಳ ವಾಹನವನ್ನು ಬೆನ್ನಟ್ಟಿದ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಪಿಕಪ್ ವಾಹನ, ಎರಡು ಸ್ಕೂಟಿ ಮತ್ತು 1,48,000ರೂ. ಹಣ ವಶಕ್ಕೆ ಪಡೆಯಲಾಗಿದೆ. ಇನ್ನು, ಚನ್ನಗಿರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಡಾ.ಸಂತೋಷ್ ಕೆಎಂ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿದ್ದು, ಪೊಲೀಸರ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಸಿಬಿ ರಿಷ್ಯಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್ ಬಿ ಬಸರಗಿ ಶ್ಲಾಘಿಸಿದರು.
ಇದನ್ನೂ ಓದಿ:ನಿಷೇಧಿತ ಇ ಸಿಗರೇಟ್ ಮಾರಾಟ.. ಬೆಂಗಳೂರಲ್ಲಿ ನಾಲ್ವರು ಆರೋಪಿಗಳ ಬಂಧನ