ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿಕೆ ದಾವಣಗೆರೆ :ಹೈಕಮಾಂಡ್ ಪಲ್ಟಿ ಹೊಡಿ ಅಂತಾರೆ. ಅವರು ಹೇಳಿದರೆಂದು ತಕ್ಷಣ ನಾನು ಪಲ್ಟಿ ಹೊಡಿಯಕಾಗುತ್ತಾ? ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿದರು. ದಾವಣಗೆರೆ ತಾಲೂಕಿನ ಹುಡುಪಿನಕಟ್ಟೆ ಗ್ರಾಮದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಮಾತನಾಡಿದ ಅವರು, ನಾನು ಏರ್ಪೋರ್ಟ್ ಹಾಗೂ ಮೆಡಿಕಲ್ ಕಾಲೇಜ್ ಕೇಳ್ತಿದ್ದೇನೆ. ಕೇಂದ್ರದವರು ಕೊಡ್ತಾನೇ ಇದ್ದಾರೆ, ನಾನು ಇಸ್ಕೊಳ್ತಾನೇ ಇದ್ದೇನೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಜಿಲ್ಲೆಗೆ ಮೆಡಿಕಲ್ ಕಾಲೇಜು, ಏರ್ಪೋರ್ಟ್ ತರಬೇಕೆಂಬ ಆಸೆ ಇದೆ. ಆದರೆ ಅದನ್ನು ಕೇಂದ್ರದವರು ಕೊಡಬೇಕಲ್ಲ?, 2019 ರಂದೇ ನಾನು ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಣೆ ಮಾಡಿದ್ದೆ. ನನ್ನ ಘೋಷಣೆಗೆ ನಾನು ಬದ್ದನಾಗಿರುವವನು, ಬದಲಾಗುವುದಿಲ್ಲ. ಕೊಟ್ಟ ಮಾತು ತಪ್ಪಲಾರೆ, ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಮಾಧ್ಯಮದಲ್ಲಿ ಬರುತ್ತಿದೆ. ಅದನ್ನು ನೋಡ್ತಾ ಸಂತೋಷಪಡುತ್ತೇನೆ ಎಂದರು.
ನಿಮಗೆ ಯಾಕೆ ಹೇಳಬೇಕು?:ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಮಗೆ ಯಾಕೆ ಹೇಳಬೇಕು?. ಹೈಕಮಾಂಡ್‌ನವರು ನನ್ನ ಅಭಿಪ್ರಾಯ ಕೇಳಿದ್ದು, ನನ್ನ ಇಚ್ಛೆ ಹೇಳಿದ್ದೇನೆ ಅಷ್ಟೇ. ಪಾರ್ಟಿ ನಿಮ್ಮ ಮತ್ತು ಮಗನ ಮೇಲೆ ಒತ್ತಡ ಹಾಕಿದರೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದೇಶ್ವರ್, ನನ್ನದು ಬೇರೆ ನನ್ನ ಮಗಂದು ಬೇರೆ ಪ್ರಶ್ನೆ. ಮಗ ಸ್ಪರ್ಧೆ ಮಾಡುವುದಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದರು.
ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರು ಚನ್ನಗಿರಿ ಕ್ಷೇತ್ರದ ಟಿಕೆಟ್ ಅನ್ನು ಮಗ ಮಾಡಾಳ್ ಮಲ್ಲಿಕಾರ್ಜುನ್‌ಗೆ ಕೊಡಿಸಿ ಲೋಕಸಭೆಗೆ ಬರುತ್ತಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬರಲಿ ಬಂದರೆ ತುಂಬಾ ಸಂತೋಷ. ಈ ವಿಚಾರವಾಗಿ ನನಗೆ ಏನೂ ಗೊತ್ತಿಲ್ಲ ಎಂದು ಹೇಳಿದರು.
ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲಾಗಿದೆ. ಒಟ್ಟು 20 ಸಾವಿರ ಕೋಟಿ ರೂ ಕಾಮಗಾರಿ ಅದು. ರಾಜ್ಯ ಸರ್ಕಾರ ಒಂದಷ್ಟು ಹಣ ಖರ್ಚು ಮಾಡಿದೆ. ಕಾಮಗಾರಿಗೆ ಹೆಚ್ಚುವರಿಯಾಗಿ ಕೇಂದ್ರ ಸರ್ಕಾರ 5300 ಕೋಟಿ ಹಣ ನೀಡುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ರಥಯಾತ್ರೆ ನಾಲ್ಕು ದಿಕ್ಕುಗಳಲ್ಲಿ ನಡೆಯಲಿದ್ದು, ಸಮಾರೋಪ ದಾವಣಗೆರೆಯಲ್ಲಿ ನಡೆಯಲಿದೆ. ಮಾರ್ಚ್ ಮೊದಲ ಹಾಗೂ ಎರಡನೇ ವಾರದಲ್ಲಿ ಬೃಹತ್ ಸಮಾವೇಶವಿದ್ದು, ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಕಲ್ಯಾಣ ಕರ್ನಾಟಕ, ಕೋಲಾರ, ಮೈಸೂರು, ಕಿತ್ತೂರು ಕರ್ನಾಟಕ ಹೀಗೆ ನಾಲ್ಕು ಕಡೆ ರಥಯಾತ್ರೆ ರೂಪದಲ್ಲಿ ಬಸ್ ಜಾತ್ರೆ ನಡೆಯಲಿದೆ. ಈ ನಾಲ್ಕೂ ಯಾತ್ರೆಗಳು ಬಂದು ದಾವಣಗೆರೆಯಲ್ಲಿ ಸೇರಲಿವೆ. ರಾಜ್ಯ ಬಿಜೆಪಿ ಈಗಾಗಲೇ ಮಾಹಿತಿ ನೀಡಿದೆ. ದಾವಣಗೆರೆಯಲ್ಲಿ ಎಲ್ಲಿ ಸಮಾವೇಶನ ಮಾಡಬೇಕೆಂದು ಸ್ಥಳ ನಿಗದಿ ಆಗಿಲ್ಲ ಎಂದರು.
ಇದನ್ನೂ ಓದಿ:ಶಾಲಾ ಕಾರ್ಯಕ್ರಮದಲ್ಲಿ ಶಾಸಕ ರೇಣುಕಾಚಾರ್ಯ ಭರ್ಜರಿ ರಾಜಕೀಯ ಭಾಷಣ:ವೇದಿಕೆಯಿಂದ ಶಾಸಕರನ್ನು ಕೆಳಗಿಳಿಸಿದ ಜನ..