ದಾವಣಗೆರೆ ದಕ್ಷಿಣ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಮೇಲೆ ಮುಸ್ಲಿಂ ನಾಯಕರ ಕಣ್ಣು: ಬಿಜೆಪಿ ರಣತಂತ್ರವೇನು?
ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದೆ. ರಾಜ್ಯದ ಪ್ರಮುಖ ಕ್ಷೇತ್ರದಲ್ಲಿ ದಾವಣಗೆರೆ ದಕ್ಷಿಣ ಮತಕ್ಷೇತ್ರ ಕೂಡ ಒಂದಾಗಿದ್ದು, ಈ ಕ್ಷೇತ್ರವನ್ನು ಕಾಂಗ್ರೆಸ್ನ ಪ್ರಭಾವಿ ನಾಯಕ ಶಾಮನೂರು ಶಿವಶಂಕರಪ್ಪ ಪ್ರತಿನಿಧಿಸುತ್ತಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಲೆಕ್ಕಾಚಾರ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ದಾವಣಗೆರೆ ದಕ್ಷಿಣ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಮೇಲೆ ಮುಸ್ಲಿಂ ನಾಯಕರ ಕಣ್ಣು: ಬಿಜೆಪಿ ರಣತಂತ್ರವೇನು?
By
Published : Mar 14, 2023, 5:44 PM IST
|
Updated : Mar 15, 2023, 2:28 PM IST
ದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ. ಕ್ಷೇತ್ರ ಪುನರ್ ವಿಂಗಡಣೆಯಾದ ನಂತರ ನಡೆದ ಮೂರೂ ಚುನಾವಣೆಗಳಲ್ಲೂ ಕಾಂಗ್ರೆಸ್ನ ಪ್ರಭಾವಿ ನಾಯಕ, ವೀರಶೈವ ಲಿಂಗಾಯಿತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆದ ಶಾಮನೂರು ಶಿವಶಂಕರಪ್ಪ ಸತತವಾಗಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಬಾರಿಸಿದ್ದಾರೆ. ಹೀಗಾಗಿ ಬಿಜೆಪಿಗೆ ಈ ಮತ ಕ್ಷೇತ್ರವು ಕಬ್ಬಿಣದ ಕಡಲೆಯಾಗಿ ಪರಿಣಿಮಿಸಿದೆ. ಆದರೆ, ಈ ಬಾರಿ ಕಾಂಗ್ರೆಸ್ನಲ್ಲೇ ಭಿನ್ನಮತ ಸ್ಫೋಟಗೊಂಡಿದ್ದು, ಟಿಕೆಟ್ ಆಕಾಂಕ್ಷಿಗಳು ಪಟ್ಟಿ ಬೆಳೆದಿದೆ.
2008ರಲ್ಲಿ ಕ್ಷೇತ್ರ ಕ್ಷೇತ್ರ ಪುನರ್ ವಿಂಗಡಣೆಯಿಂದ ದಾವಣಗೆರೆ ವಿಧಾನಸಭಾ ಕ್ಷೇತ್ರವು ದಕ್ಷಿಣ ಮತ್ತು ಉತ್ತರ ಕ್ಷೇತ್ರಗಳೆಂದು ವಿಭಜನೆಯಾಗಿದೆ. ಆದರೆ, ಮೂಲ ದಾವಣಗೆರೆ ಅಂದರೆ ಹಳೆ ದಾವಣಗೆರೆಯ ಭಾಗವಾಗಿದ್ದು, ಇದೀಗ ಅದು ದಕ್ಷಿಣ ವಿಧಾನಸಭಾ ಕ್ಷೇತ್ರವಾಗಿ ಜಾರಿಗೆ ಬಂದಿದೆ. ಇಲ್ಲಿ ಕಾಂಗ್ರೆಸ್ ಪಕ್ಷ ತನ್ನ ಹಿಡಿತ ಸಾಧಿಸುತ್ತಲೇ ಬಂದಿದೆ. ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಪ್ರತಿನಿಧಿಸುತ್ತಿದ್ದಾರೆ. 2008ರಿಂದ ಅವರು ನಿರಂತರವಾಗಿ ಗೆಲುವು ಸಾಧಿಸುತ್ತಾ ಬಂದಿದ್ದರಿಂದ ಕಾಂಗ್ರೆಸ್ನ ಭದ್ರಕೋಟೆಯಾಗಿ ಮಾರ್ಪಟ್ಟಿದೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಹಿತಿ
ಮೂರು ಚುನಾವಣೆಗಳ ಇತಿಹಾಸ: 2008ರ ಚುನಾವಣೆಯಲ್ಲಿ ಈ ಕ್ಷೇತ್ರ ಕಾಂಗ್ರೆಸ್ ವಶವಾಯಿತು. ಈ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ 6,358 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆಗ ಅವರು 41,675 ಮತಗಳನ್ನು ಪಡೆದಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಯಶವಂತರಾವ್ ಜಾಧವ್ 35,317 ಮತಗಳನ್ನು ಪಡೆದು ಪ್ರಬಲ ಪೈಪೋಟಿ ನೀಡಿದ್ದರು. ಈ ಚುನಾವಣೆಯಲ್ಲಿ ಜೆಡಿಎಸ್ ಕಣದಲ್ಲಿ ಇರಲಿಲ್ಲ.
2013ರ ಚುನಾವಣೆಯಲ್ಲೂ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಶಾಮನೂರು ಶಿವಶಂಕರಪ್ಪ 66,320 ಮತಗಳನ್ನು ಪಡೆದು ಎರಡನೇ ಬಾರಿಗೂ ಜಯ ಸಾಧಿಸಿದ್ದರು. ಜೆಡಿಎಸ್ನಿಂದ ಕಣಕ್ಕಿಳಿದಿದ್ದ ಕರೆಕಟ್ಟೆ ಸೈಯದ್ ಸೈಫುಲ್ಲಾ 26,162 ಮತಗಳ ಪಡೆದು ಗಮನ ಸೆಳೆದಿದ್ದರು. ಬಿಜೆಪಿಯ ಬಿ. ಲೋಕೇಶ್ ಅತಿ ಕಡಿಮೆ ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದ್ದರು.
2018ರಲ್ಲಿ ಮೂರನೇ ಬಾರಿಗೆ ಶಾಮನೂರು ಗೆಲುವು ಸಾಧಿಸಿ ತಮ್ಮ ಪ್ರಾಬಲ್ಯ ತೋರಿದ್ದರು. ಅಲ್ಲದೇ, ಕಳೆದ ಎರಡು ಚುನಾವಣೆಗಳಿಂತ ಹೆಚ್ಚಿನ ಎಂದರೆ 71,369 ಮತಗಳು ಪಡೆದು ಹ್ಯಾಟ್ರಿಕ್ ಬಾರಿಸಿದ್ದರು. ಬಿಜೆಪಿಯಿಂದ ಮತ್ತೊಮ್ಮೆ ಅಗ್ನಿ ಪರೀಕ್ಷೆಗೆ ಇಳಿದಿದ್ದ ಯಶವಂತರಾವ್ ಜಾಧವ್ 55,485 ಮತಗಳು ಪಡೆದು ಸೋತಿದ್ದರು. ಜೆಡಿಎಸ್ ಅಭ್ಯರ್ಥಿಯಾಗಿದ್ದ ಅಮಾನುಲ್ಲಾ ಖಾನ್ ಠೇವಣಿ ಕಳೆದುಕೊಂಡಿದ್ದರು.
ಕಾಂಗ್ರೆಸ್ನಲ್ಲಿ ಹೆಚ್ಚಿದ ಟಿಕೆಟ್ ಆಕಾಂಕ್ಷಿಗಳು: ಕ್ಷೇತ್ರದಲ್ಲಿ ಸತತವಾಗಿ ಮೂರು ಬಾರಿ ಗೆಲುವು ಸಾಧಿಸಿರುವ ಲಿಂಗಾಯಿತ ಪ್ರಬಲ ನಾಯಕರಾದ ಶಾಮನೂರು ಶಿವಶಂಕರಪ್ಪ ಮತ್ತೊಮ್ಮೆ ಸ್ಪರ್ಧಿಸುವ ಇಚ್ಛೆ ಹೊಂದಿದ್ದಾರೆ. ಮುಸ್ಲಿಂ ಮತ್ತು ಲಿಂಗಾಯಿತ ಮತಗಳು ಹೆಚ್ಚಿದ್ದು, ಎರಡನ್ನೂ ಕ್ರೂಢೀಕರಣ ಮಾಡಲು ಸಫಲರಾಗುತ್ತಿದ್ದಾರೆ. ಆದರೆ, 83 ಸಾವಿರ ಮುಸ್ಲಿಂ ಮತದಾರರಿದ್ದು, ಕಾಂಗ್ರೆಸ್ ಗೆಲುವಿಗೆ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಮುಸ್ಲಿಂ ಮತದಾರರೇ ಇಲ್ಲಿ ಶಿವಶಂಕರಪ್ಪ ಅವರ ಕೈ ಹಿಡಿಯುತ್ತಾ ಬರುತ್ತಿದ್ದಾರೆ ಎಂಬುವುದು ಸುಳ್ಳಲ್ಲ. ಆದರೆ, ಈ ಬಾರಿ ಮುಸ್ಲಿಂ ಮುಖಂಡರು ಪಕ್ಷದ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ.
ಕ್ಷೇತ್ರದಲ್ಲಿ ಮುಸ್ಲಿಮರ ಪ್ರಾಬಲ್ಯ ಹೆಚ್ಚಿದ್ದರೂ ಕೂಡ ಸಮುದಾಯದ ವ್ಯಕ್ತಿಗೆ ಟಿಕೆಟ್ ಕೊಡದೇ ಕಾಂಗ್ರೆಸ್ ವಂಚಿಸುತ್ತಿದೆ ಎಂಬ ಆರೋಪವನ್ನು ಮುಸ್ಲಿಂ ಮುಖಂಡರು ಮಾಡುತ್ತಿದ್ದಾರೆ. ಅಲ್ಲದೇ, ಸಾಧಿಕ್ ಫೈಲ್ವಾನ್, ಸೈಯದ್ ಸೈಪುಲ್ಲಾ, ಮಹಮ್ಮದ್ ಇಕ್ಬಾಲ್, ಸೈಯದ್ ಖಾಲಿದ್ ಅಹ್ಮದ್, ಇಬ್ರಾಹಿಂ ಖಲೀವುಲ್ಲಾ ಟಿಕೆಟ್ ಬಯಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಬಿ.ವೀರಣ್ಣ ಕೂಡ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದು, ಒಟ್ಟಾರೆ ಕಾಂಗ್ರೆಸ್ನಲ್ಲಿ ಏಳು ಜನರು ಆಕಾಂಕ್ಷಿಗಳಿದ್ದಾರೆ.
ಮತ್ತೊಂದೆಡೆ, ಈಗಾಗಲೇ ಜೆಡಿಎಸ್ ಪಕ್ಷದಿಂದ ಮುಸ್ಲಿಂ ಸಮುದಾಯದ ಅಮಾನುಲ್ಲಾ ಖಾನ್ ಅವರನ್ನು ಅಭ್ಯರ್ಥಿ ಎಂದು ಘೋಷಿಸಲಾಗಿದೆ. ಇದು ಕಾಂಗ್ರೆಸ್ಗೆ ತಲೆಬಿಸಿ ಆಗುವಂತೆ ಆಗಿದೆ. ಬಿಜೆಪಿಯಿಂದ ಪರಾಜಿತ ಅಭ್ಯರ್ಥಿಯಾದ ಯಶವಂತರಾವ್ ಜಾಧವ್ ಮತ್ತೊಮ್ಮೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅಲ್ಲದೇ, ಮಾಜಿ ಮೇಯರ್ ಅಜಯ್ ಕುಮಾರ್, ಬಿಎಂ ಸತೀಶ್, ಶ್ರೀನಿವಾಸ್ ದಾಸಕರಿಯಪ್ಪ, ರಾಜನಹಳ್ಳಿ ಶಿವಕುಮಾರ್, ಆನಂದಪ್ಪ, ಹೆಚ್.ಎಸ್.ನಾಗರಾಜ್ ಸೇರಿ ಎಂಟು ಜನ ಟಿಕೆಟ್ ಆಕಾಂಕ್ಷಿಗಳಿದ್ದಾರೆ.
ಅದರಲ್ಲೂ, ಬಿಜೆಪಿಯಲ್ಲಿ ಈ ಬಾರಿ ಅಜಯ್ ಕುಮಾರ್ ಟಿಕೆಟ್ನ ಪ್ರಬಲ ಆಕಾಂಕ್ಷಿ. ಮೇಯರ್ ಆಗಿದ್ದ ಸಂದರ್ಭದಲ್ಲಿ ಮುಸ್ಲಿಂ ಕಾಲೋನಿಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದರಿಂದ ಕೆಲ ಮುಸ್ಲಿಂ ಮತಗಳು ಕೈಹಿಡಿಯುವ ಸಾಧ್ಯತೆ ಇದೆ ಎನ್ನುವ ಲೆಕ್ಕಾಚಾರ ಇದೆ. ಒಟ್ಟಾರೆ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯಾದರೂ ಗೆಲುವು ಸಾಧಿಸಬೇಕೆಂಬ ನಿಟ್ಟಿನಲ್ಲಿ ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಕಾಂಗ್ರೆಸ್ ತನ್ನ ಕ್ಷೇತ್ರ ಉಳಿಸಿಕೊಳ್ಳಲು ಯಾವ ಪ್ರತಿತಂತ್ರ ರೂಪಿಸಲಿದೆ ಎನ್ನುವ ಕೆಲ ದಿನಗಳಲ್ಲಿ ಗೊತ್ತಾಗಲಿದೆ.