ದಾವಣಗೆರೆ: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮೂಲದ ಯುವತಿಯರು ಹಾಗೂ ಯುವಕರ ನಡುವೆ ನಡೆದ ಜಗಳವನ್ನು ಬಿಡಿಸಲು ಮಧ್ಯೆ ಪ್ರವೇಶಿಸಿದ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಹಾಗೂ ಓರ್ವ ಯುವತಿ ಮೇಲೆ ಹಲ್ಲೆ ನಡೆಸಿರುವ ಘಟನೆ ನಗರದಲ್ಲಿ ಮಂಗಳವಾರ ದಿನ ತಡರಾತ್ರಿ ನಡೆದಿದೆ. ಇನ್ನು ಹಲ್ಲೆ ಮಾಡಿದ ಬೆನ್ನಲ್ಲೇ ಮಹಿಳಾ ಕಾನ್ಸ್ಟೇಬಲ್ ಕೈಗೆ ಗಾಯಗಳಾಗಿದ್ದು, ಘಟನೆ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಈ ಘಟನೆ ದಾವಣಗೆರೆಯ ವಿದ್ಯಾನಗರದ ಕೊನೆ ಬಸ್ ಸ್ಟಾಪ್ ಬಳಿ ಕಳೆದ ದಿನ ತಡರಾತ್ರಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವೇಶ್ಯಾವಾಟಿಕೆಗೆ ತಳ್ಳುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಾಟೆ: ಇಬ್ಬರು ಯುವತಿಯರು ಹಾಗೂ ಮಂಜುನಾಥ ಮತ್ತು ಹರ್ಷಾ ಎಂಬುವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಮಹಾರಾಷ್ಟ್ರ ಮೂಲದ ಯುವತಿಯರನ್ನು ನಗರಕ್ಕೆ ಕರೆಸಿ ವೇಶ್ಯಾವಾಟಿಕೆಗೆ ತಳ್ಳುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ಕೊಡಮಾಡುವ ವಿಚಾರವಾಗಿ ಈ ಘಟನೆ ನಡೆದಿದೆ ಎಂದು ಎಸ್ಪಿ ಸಿ ಬಿ ರಿಷ್ಯಂತ ತಿಳಿಸಿದ್ದಾರೆ.
ಇದನ್ನೂ ಓದಿ :ಅಂತಾರಾಷ್ಟ್ರೀಯ ಗೋಲ್ಡ್ ಸ್ಮಗ್ಲಿಂಗ್ ದಂಧೆ ಬೆಳಕಿಗೆ : ಕೋಡ್ ಮೂಲಕ ವಿದೇಶದಿಂದ ಬರುತ್ತಿದ್ದ ಚಿನ್ನ ವಶಕ್ಕೆ
ಘಟನೆಯ ಹಿನ್ನೆಲೆ :ದಾವಣಗೆರೆಯ ಯೋಗೀಶ್, ಕುಮಾರ್ ನಾಯ್ಕ್, ಹೇಮರಾಜ್ ಅವರ ಜೊತೆ ಫೋನ್ ಸಂಪರ್ಕದಲ್ಲಿದ್ದ ಮಹಾರಾಷ್ಟ್ರ ಮೂಲದ ಯುವತಿಯರು ದಾವಣಗೆರೆಗೆ ಆಗಮಿಸಿದ್ದರು. ಮಂಗಳವಾರ ತಡರಾತ್ರಿ ಗಿರಾಕಿಗಳಾದ ಶಿವಮೊಗ್ಗ ಮೂಲದ ಹರೀಶ್ ಮತ್ತು ಮಂಜುನಾಥ್ ಜೊತೆ ವಿದ್ಯಾನಗರದ ಲಾಸ್ಟ್ ಬಸ್ಸ್ಟಾಪ್ ನಲ್ಲಿ ಕಿತ್ತಾಡಿಕೊಂಡಿದ್ದಾರೆ.
ಓರ್ವ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ಗೆ ಗಾಯ: ಈ ವೇಳೆ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ವಿದ್ಯಾನಗರ ಪೊಲೀಸರು. ಜಗಳ ಬಿಡಿಸಲು ಮುಂದಾದಾಗ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಗಲಾಟೆ ವೇಳೆ ಓರ್ವ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ಗೆ ಗಾಯವಾಗಿದ್ದು, ಕುಡಿದ ಮತ್ತಿನಲ್ಲಿದ್ದ ಯುವತಿಯರು ಗಲಾಟೆ ಎಬ್ಬಿಸಿ ರಾದ್ದಾಂತ ಮಾಡಿದ್ದಾರೆ. ಕೊನೆಗೆ ನಾಲ್ವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಲಾಗಿದೆ.