ಕರ್ನಾಟಕ

karnataka

ETV Bharat / state

ಸರಿಯಾದ ಸಮಯಕ್ಕೆ ಬಾರದ ಮುಂಗಾರು ಮಳೆ.. ಬರಿದಾಗುತ್ತಿದೆ ಏಷ್ಯಾದ 2ನೇ ಅತಿದೊಡ್ಡ ಸೂಳೆಕೆರೆ

ಮುಂಗಾರುಮಳೆಯ ಕೊರತೆಯ ಹಿನ್ನೆಲೆ ಚನ್ನಗಿರಿ ತಾಲೂಕಿನ ಶಾಂತಿಸಾಗರ ಬರಿದಾಗುತ್ತಿದೆ.

ಶಾಂತಿಸಾಗರ
ಶಾಂತಿಸಾಗರ

By

Published : Jul 6, 2023, 7:08 PM IST

ದಾವಣಗೆರೆ : ಏಷ್ಯಾದ ಎರಡನೇ ಅತಿದೊಡ್ಡ ಕೆರೆ ಎಂದೇ ಖ್ಯಾತಿ ಪಡೆದಿರುವ ಚನ್ನಗಿರಿ ತಾಲೂಕಿನ ಶಾಂತಿಸಾಗರ (ಸೂಳೆಕೆರೆ) ಬರಿದಾಗುತ್ತಿದೆ. ಮುಂಗಾರು ಮಳೆ ಸರಿಯಾದ ಸಮಯಕ್ಕೆ ಬಾರದ ಬೆನ್ನಲ್ಲೇ ಕೆರೆಯಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ. ಕಳೆದ ಬಾರಿ ಮಳೆಗಾಲಯಲ್ಲಿ ಈ ಹೊತ್ತಿಗೆ ಇಡೀ ಕೆರೆ ಜೀವಜಲದಿಂದ ತುಂಬಿ ಕೋಡಿ ಬಿದ್ದಿತ್ತು. ಈ ವರ್ಷ ಜೂನ್ ತಿಂಗಳು ಕಳೆದು ಜುಲೈ ತಿಂಗಳು ಆರಂಭವಾಗಿ ವಾರ ಕಳೆದ್ರೂ ಕೂಡ ಸರಿಯಾಗಿ ಮಳೆಯಾಗದೆ ಕೆರೆಗೆ ನೀರು ಹರಿದುಬಾರದೆ ಇರುವುದು ರೈತರನ್ನು ಆತಂಕಕ್ಕೆ ದೂಡಿದಂತಾಗಿದೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿರುವ ಶಾಂತಿ ಸಾಗರ (ಸೂಳೆಕೆರೆ) ಚನ್ನಗಿರಿ ಸೇರಿದಂತೆ ನೆರೆಯ ಜಿಲ್ಲೆಯ ಚಿತ್ರದುರ್ಗ, ಹೊಳಲ್ಕೆರೆ ತಾಲೂಕುಗಳಿಗೆ ಕುಡಿಯುವ ನೀರನ್ನು ಒದಗಿಸುತ್ತಿರುವ ಪ್ರಮುಖ ಕೆರೆ. ಸರಿಯಾದ ಸಮಯಕ್ಕೆ ಮಳೆಯ ಆಗಮನ ಆಗದೆ ಇರುವುದರಿಂದ ದಿನೇ ದಿನೆ ಕೆರೆಯಲ್ಲಿ ನೀರು ಖಾಲಿಯಾಗುತ್ತಿದೆ.

ಈ ಕೆರೆಯು ಒಟ್ಟು 32 ಅಡಿ ಆಳವಿದ್ದು, 05 ಅಡಿಯಷ್ಟು ಹೂಳು ತುಂಬಿಕೊಂಡಿದ್ದರಿಂದ 27 ಅಡಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಈ ಕೆರೆ ಹೊಂದಿದೆ. ಅಂದ್ರೆ ಒಟ್ಟು 06 ಟಿಎಂಸಿಯಷ್ಟು ನೀರು ಶೇಖರಣೆ ಮಾಡಬಹುದಾಗಿದೆ. ಇದೀಗ ಒಟ್ಟು 27 ಅಡಿಯಲ್ಲಿ 15 ಅಡಿಯಷ್ಟು ನೀರು ಇಳಿಮುಖವಾಗಿರುವುದರಿಂದ ಮೀನುಗಾರರಿಗೆ, ಜನಸಾಮಾನ್ಯರಿಗೆ ಹಾಗು ರೈತರಿಗೆ ಆತಂಕಕ್ಕೆ ಕಾರಣವಾಗಿದೆ. 15 ಅಡಿಯಷ್ಟು ನೀರು ಕಡಿಮೆಯಾಗಿದ್ದರಿಂದ ಚನ್ನಗಿರಿ ತಾಲೂಕಿನ ಕೆರೆಬಿಳಚಿ,‌ ಹೊಸಹಳ್ಳಿ, ಹೊಸನಗರ, ರುದ್ರಾಪುರ ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಮಳೆಬಾರದೆ ಇದ್ರೆ ಜನರಿಗೆ ಸಂಕಷ್ಟ ಕಟ್ಟಿಟ್ಟಬುತ್ತಿ: ಸದ್ಯ ಶಾಂತಿಸಾಗರದಲ್ಲಿ ಕುಡಿಯುವ ನೀರು 80 ದಿನಕ್ಕೆ ಮಾತ್ರ ಲಭ್ಯವಿದೆ ಎಂದು ನೀರಾವರಿ ಇಲಾಖೆಯ ಪ್ರಭಾರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಪ್ಪೇಸ್ವಾಮಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು.‌

ಶಾಂತಿಸಾಗರ (ಸೂಳೆಕೆರೆ) ನೀರಿನ ಒಟ್ಟು ಸಾಮರ್ಥ್ಯ 32 ಅಡಿ ಇದ್ದು, ಸಧ್ಯ ಕೆರೆಯಲ್ಲಿ ಹೂಳು ಶೇಖರಣೆಯಾಗಿದ್ದರಿಂದ‌ 27 ಅಡಿಗೆ ಮಾತ್ರ ನೀರು ಶೇಖರಣೆಯಾಗುತ್ತಿದೆ. ಒಟ್ಟು 06 ಟಿಎಂಎಸ್ ನೀರು ಶೇಖರಣೆಯಾಗುವ ಸಾಮರ್ಥ್ಯ ಹೊಂದಿದೆ.‌ ಪ್ರಸ್ತುತವಾಗಿ ಕೆರೆಯಲ್ಲಿ 12 ಅಡಿ ಅಂದ್ರೆ 02 ಟಿಎಂಸಿ ನೀರು ಖಾಲಿಯಾಗಿದೆ.

ಈ ವೇಳೆ ಮಳೆ ಆಗಮನ ಆಗಲಿಲ್ಲ ಅಂದ್ರೆ 80 ದಿನಗಳಿಗೆ ಮಾತ್ರ ಕುಡಿಯುವ ನೀರು ಲಭ್ಯವಾಗಲಿದೆ. ಇದರಿಂದ ಚಿತ್ರದುರ್ಗ, ಹೊಳಲ್ಕೆರೆ, ಚನ್ನಗಿರಿ, ಜಗಳೂರು ತಾಲೂಕುಗಳಿಗೆ ನೀರಿನ ಅಭಾವ ಎದುರಾಗಲಿದೆ ಎಂದು ನೀರಾವರಿ ಇಲಾಖೆಯ ಪ್ರಭಾರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಪ್ಪೇಸ್ವಾಮಿ ಮಾಹಿತಿ ನೀಡಿದರು.

ಇನ್ನು ರೈತ ಮುಖಂಡ ತೇಜಸ್ವಿ ಪಟೇಲ್ ಅವರು ಪ್ರತಿಕ್ರಿಯಿಸಿ, ಅನಗತ್ಯ ನೀರಿನ ಯೋಜನೆಗಳನ್ನು ರೂಪಿಸಿ ನೀರಿಗಾಗಿ ಸಮಸ್ಯೆ ಎದುರಾಗುವಂತೆ ಸರ್ಕಾರ ಮಾಡಿದೆ.‌ ಕಳೆದ ಬಾರಿ ಕೆರೆ ಭರ್ತಿಯಾದಾಗ ಜನರ ಗಮನ ಸೆಳೆದಿತ್ತು. ಆದರೆ ಈಬಾರಿ ನೀರಿನ‌ ಅಭಾವದಿಂದ ಚಿಂತಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದರು.‌

ಇದನ್ನು ಓದಿ:ಕೋಡಿ ಒಡೆದ ಏಷ್ಯಾದ ಎರಡನೇ ಅತಿ ದೊಡ್ಡ ಕೆರೆ

ABOUT THE AUTHOR

...view details