ದಾವಣಗೆರೆ: ಭದ್ರಾ ನೀರಿಗಾಗಿ ಟ್ರ್ಯಾಕ್ಟರ್ ರ‍್ಯಾಲಿಗೆ ಮುಂದಾದ ರೈತರನ್ನು ವಶಕ್ಕೆ ಪಡೆದ ಪೊಲೀಸರು ದಾವಣಗೆರೆ:ಭದ್ರಾ ನಾಲೆಯಿಂದ ನೀರು ಹರಿಸದ ಹಿನ್ನೆಲೆ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲು ಮುಂದಾಗಿದ್ದ ರೈತ ಮುಖಂಡರು, ರೈತರನ್ನು ಪೊಲೀಸರು ವಶಕ್ಕೆ ಪಡೆದರು. ಭದ್ರಾದಿಂದ 100 ದಿನಗಳ ಕಾಲ ನಿರಂತರವಾಗಿ ನೀರು ಹರಿಸಬೇಕು ಎಂದು ಒತ್ತಾಯಿಸಿ ಒಂದು ವಾರದಿಂದ ಹೋರಾಟ ನಡೆಸುತ್ತಿರುವ ರೈತರು ಇಂದು ಟ್ರ್ಯಾಕ್ಟರ್ ರ‍್ಯಾಲಿ ನಡೆಸಲು ಮುಂದಾಗಿದ್ದರು.
ಬೀರಲಿಂಗೇಶ್ವರ ದೇವಸ್ಥಾನದಿಂದ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲು ಸಿದ್ಧತೆ ಮಾಡಿಕೊಂಡಿದ್ದ ರೈತರನ್ನು ಪೊಲೀಸರು ತಡೆದರು. ಈ ವೇಳೆ ಪೊಲೀಸರು ಮತ್ತು ರೈತರ ಮಧ್ಯೆ ವಾಗ್ವಾದ ನಡೆಯಿತು. ಜಿಲ್ಲೆಯಲ್ಲಿ 62 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದೆ. 100 ದಿನ ನೀರು ಬಿಡುವುದಾಗಿ ಆದೇಶ ಮಾಡಿ ಈಗ ಏಕಾಏಕಿ ನೀರು ನಿಲ್ಲಿಸಿರುವುದರಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ರೈತರು ಅಳಲು ತೋಡಿಕೊಂಡರು.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ಭದ್ರಾ ನಾಲೆಗೆ ನೀರು ಹರಿಸಿಲ್ಲ ಎಂದು ರೈತರು ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಸುಮಾರು 20ಕ್ಕೂ ಹೆಚ್ಚು ಟ್ರ್ಯಾಕ್ಟರ್ಗಲ್ಲಿ ರೈತರು ಬೀರಲಿಂಗೇಶ್ವರ ದೇವಸ್ಥಾನದ ಬಳಿ ಬಂದು ಪ್ರತಿಭಟನೆ ನಡೆಸುತ್ತಿದ್ದರು. ಅವರು ಇಲ್ಲಿಂದ ರ‍್ಯಾಲಿ ನಡೆಸಿಕೊಂಡು ಹೋಗಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆಯುತ್ತಾರೆ ಎಂಬ ಮಾಹಿತಿ ಸಿಕ್ಕ ಹಿನ್ನೆಲೆ ಅವರನ್ನು ವಶಕ್ಕೆ ಪಡೆದಿದ್ದೇವೆ ಎಂದರು.
ಸದ್ಯ 35 ರೈತರನ್ನು ವಶಕ್ಕೆ ಪಡೆಯಲಾಗಿದೆ. ಶಾಂತಿಯುತವಾದ ಪ್ರತಿಭಟನೆಗೆ ಅವಕಾಶ ಕೊಟ್ಟಿದ್ದೇವೆ. ನಿನ್ನೆಯೂ ಕೂಡ ಹೋಗಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿದ್ದರು. ಇಂದು 20ಕ್ಕೂ ಹೆಚ್ಚು ಟ್ರ್ಯಾಕ್ಟರ್ಗಳ ಮೂಲಕ ಹೋಗಿ ಹೆದ್ದಾರಿಯನ್ನು ಬಂದ್ ಮಾಡಿದರೆ ಸಮಸ್ಯೆಯಾಗುತ್ತದೆ ಎಂದು ಮುಂಜಾಗ್ರತಾ ಕ್ರಮವಾಗಿ ರೈತರನ್ನು ವಶಕ್ಕೆ ಪಡೆದಿದ್ದೇವೆ. ನೀರು ಹರಿಸುವ ಬಗ್ಗೆ ಜಿಲ್ಲಾಧಿಕಾರಿಯವರು ಸಭೆ ನಡೆಸಿ ವರದಿಯನ್ನು ಕಳುಹಿಸಿಕೊಟ್ಟಿದ್ದಾರೆ. ಈ ಸಂಬಂಧ ಏನು ನಿರ್ಧಾರವಾಗುತ್ತದೆ ಎಂದು ಕಾದು ನೋಡಬೇಕು. ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಸಂಸದ ಜಿಎಂ ಸಿದ್ದೇಶ್ವರ ಕಚೇರಿಗೆ ಮುತ್ತಿಗೆ:ಮತ್ತೊಂದೆಡೆ, ದಾವಣಗೆರೆಯಲ್ಲಿ ಕರವೇ ಕಾರ್ಯಕರ್ತರು ಸಂಸದ ಜಿಎಂ ಸಿದ್ದೇಶ್ವರ ಹಾಗೂ ಎಸಿ ಕಚೇರಿಗೆ ಮುತ್ತಿಗೆ ಹಾಕಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ನಿಲ್ಲಿಸುವಂತೆ ಒತ್ತಾಯಿಸಿದರು. ನಗರದ ಹಳೇ ಪಿಬಿ ರಸ್ತೆಯಲ್ಲಿ ಇರುವ ಸಂಸದ ಜಿಎಂ ಸಿದ್ದೇಶ್ವರ ಕಚೇರಿಗೆ ಕರವೇ ಜಿಲ್ಲಾಧ್ಯಕ್ಷ ರಾಮೇಗೌಡ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಕಾವೇರಿ ವಿಚಾರವಾಗಿ ರಾಜ್ಯದ ಸಂಸದರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಕರವೇ ಕಾರ್ಯಕರ್ತರು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಇದನ್ನೂ ಓದಿ:ಕಾವೇರಿ ಕಿಚ್ಚು: ಡಿಸಿ ಕಚೇರಿ ಎದುರು ಧರಣಿ, ಸಿಎಂಗೆ ಕಪ್ಪು ಬಾವುಟ ಪ್ರದರ್ಶನದ ಎಚ್ಚರಿಕೆ