ದಾವಣಗೆರೆ:ನಗರದಲ್ಲಿ ನಿತ್ಯ ಸಂಗ್ರಹವಾಗುವ ಕಸವನ್ನು ಸರಿಯಾಗಿ ವಿಲೇವಾರಿ ಮಾಡುತ್ತಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ. ಆದರೆ, ಎಷ್ಟೇ ಅರಿವು ಮೂಡಿಸಿದರೂ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುತ್ತಿರುವ ಕಾರಣ, ಕಸ ವಿಲೇವಾರಿ ಕಷ್ಟವಾಗಿದೆ ಎನ್ನಲಾಗಿದೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿತ್ಯ ಸುಮಾರು 160 ಟನ್ವರೆಗೆ ಒಣ, ಹಸಿ ಕಸ ಸಂಗ್ರಹವಾಗುತ್ತಿದೆ. ಶೇ.70ರಷ್ಟು ಮಂದಿ ಕಸದ ವಾಹನಗಳಿಗೆ ನೀಡುತ್ತಿದ್ದರೆ, ಉಳಿದವರು ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ ಎಂದು ಪಾಲಿಕೆ ಹೇಳುತ್ತಿದೆ. ಹೀಗೆ ಎಲ್ಲೆಂದರಲ್ಲಿ ಕಸ ಸುರಿಯುವವರ ವಿರುದ್ಧ ಕ್ರಮಕ್ಕೆ ಪಾಲಿಕೆ ಮುಂದಾಗಿದೆ. ಅದರಲ್ಲೂ ಮದುವೆ, ಸಭೆ-ಸಮಾರಂಭ ಸೇರಿ ಇತರೆ ಕಾರ್ಯಕ್ರಮಗಳಿಗೆ ಸರ್ಕಾರ ಅನುಮತಿ ನೀಡಿದ ಬಳಿಕ ಕಸ ಉತ್ಪತ್ತಿ ಹೆಚ್ಚಾಗಿದೆ. ಹೀಗಾಗಿ, ವಿಲೇವಾರಿ ಕೊಂಚ ಮಟ್ಟಿಗೆ ಕಷ್ಟವಾಗುತ್ತಿದೆ.
ಕೋವಿಡ್ನಿಂದ ಉತ್ಪತ್ತಿಯಾಗುತ್ತಿರುವ ಮಾಸ್ಕ್, ಪಿಪಿಇ ಕಿಟ್, ಹ್ಯಾಂಡ್ ಗ್ಲೌಸ್, ಬ್ಯಾಂಡೇಜ್ ಸೇರಿದಂತೆ ಇತರೆ ವೈದ್ಯಕೀಯ ತ್ಯಾಜ್ಯವನ್ನು ವಿಲೇವಾರಿ ಮಾಡಲು ಸುಶಾಂತ್ ಎನ್ವಿರಾನ್ಮೆಂಟ್ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಸದ್ಯ ಕೊರೊನಾ ಪ್ರಕರಣಗಳು ಕಡಿಮೆ ದಾಖಲಾಗುತ್ತಿದ್ದು, ವೈದ್ಯಕೀಯ ತ್ಯಾಜ್ಯದ ಪ್ರಮಾಣವೂ ತಗ್ಗಿದೆ. ಹರಿಹರ ತಾಲೂಕಿನ ಅಮರಾವತಿಯಲ್ಲಿ ಈ ತ್ಯಾಜ್ಯ ಸಂಸ್ಕರಿಸುವ ಕೆಲಸ ನಡೆಯುತ್ತಿದೆ.
ಪಾಲಿಕೆಯ ಆರೋಗ್ಯ ಇಲಾಖೆ ವಿಭಾಗದ ಸಹಾಯಕ ನಿರ್ದೇಶಕ ಡಾ.ಸಂತೋಷ್ ಪಿಪಿಇ ಕಿಟ್, ಹ್ಯಾಂಡ್ ಗ್ಲೌಸ್ ಬಳಸಿ ತ್ಯಾಜ್ಯ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಸೋಂಕಿತರು ಅಧಿಕವಾಗಿದ್ದಾಗ ವೈದ್ಯಕೀಯ ತ್ಯಾಜ್ಯವೂ ಹೆಚ್ಚಾಗಿತ್ತು. ಆದರೆ, ಈಗದರ ಪ್ರಮಾಣ ಇಳಿದಿದೆ. ಪಾಲಿಕೆ ವ್ಯಾಪ್ತಿಯಲ್ಲಿ ವಾಹನಗಳು, ತಳ್ಳುವ ಗಾಡಿಗಳ ಮೂಲಕ ಕಸ ಸಂಗ್ರಹ ಮಾಡಲಾಗುತ್ತಿದೆ ಎನ್ನುತ್ತಾರೆ ಪಾಲಿಕೆಯ ಆರೋಗ್ಯ ಇಲಾಖೆ ವಿಭಾಗದ ಸಹಾಯಕ ನಿರ್ದೇಶಕ ಡಾ.ಸಂತೋಷ್.