ದಾವಣಗೆರೆ: ಮಕ್ಕಳಿಗೆ, ಗರ್ಭಿಣಿ, ಬಾಣಂತಿಯರಿಗೆ ಉಪಯೋಗವಾಗಲಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆಯಿಂದ ಪೌಷ್ಟಿಕ ಆಹಾರ ನೀಡಲಾಗುತ್ತೆ. ಆದರೆ, ಅಂಗನವಾಡಿಯಲ್ಲಿ ನೀಡಿದ ಪಡಿತರದಲ್ಲಿ ಪ್ಲಾಸ್ಟಿಕ್ ಅಕ್ಕಿ ಮಿಶ್ರಣ ಆಗಿದೆ ಎಂಬ ಆತಂಕ ಜನರನ್ನು ಕಾಡುತ್ತಿದೆ. ಇತ್ತ ಅಧಿಕಾರಿಗಳು ಅದು ಪ್ಲಾಸ್ಟಿಕ್ ಅಕ್ಕಿ ಅಲ್ಲ, ವಿಟಮಿನ್ ಅಕ್ಕಿ ಎಂದು ಹೇಳುತ್ತಿದ್ದಾರೆ.
ಅಂಗನವಾಡಿ ಪಡಿತರದಲ್ಲಿ ಪ್ಲಾಸ್ಟಿಕ್ ಅಕ್ಕಿ ವದಂತಿ ಬಗ್ಗೆ ಸಿಡಿಪಿಒ ನಿರ್ಮಲಾ ಮಾತನಾಡಿದರು ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ ಗ್ರಾಮಸ್ಥರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪ್ಲಾಸ್ಟಿಕ್ ಅಕ್ಕಿ ವಿತರಿಸಲಾಗಿದೆ ಎಂದು ಆತಂಕದಲ್ಲಿ ಕಾಲಕಳೆದಿದ್ದಾರೆ. ಆರೋಗ್ಯ ವೃದ್ಧಿಗಾಗಿ ಬಳಸುವ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ವದಂತಿಯಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿತ್ತು.
ಇದೇ ಕಾರಣಕ್ಕೆ ಅಂಗನವಾಡಿಯಿಂದ ಪಡಿತರ ಪಡೆದ ಕೆಲವರು ಪ್ಲಾಸ್ಟಿಕ್ ಅಕ್ಕಿ ಎಂದು ಅನುಮಾನ ವ್ಯಕ್ತಪಡಿಸಿ ಅಕ್ಕಿಯನ್ನು ಹಿಡಿದು ಗ್ರಾ. ಪಂ ಗೆ ಲಗ್ಗೆ ಇಟ್ಟು, ಇತರರಲ್ಲಿ ಆತಂಕ ಸೃಷ್ಟಿಸಿದ್ದರು. ಇದರಿಂದ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಗ್ರಾಮದ ಮುಖಂಡರು ಪಂಚಾಯತ್ಗೆ ದೌಡಾಯಿಸಿ ಗ್ರಾಮಸ್ಥರು ತಂದಿದ್ದ ಅಕ್ಕಿಯನ್ನು ಪರಿಶೀಲಿಸಿದ್ದರು.
ಬೆಳ್ಳೂಡಿ ಗ್ರಾಮ ಪಂಚಾಯತಿ ಕಾರ್ಯಾಲಯ ಎಫ್ ಸಿ (ಫುಡ್ ಸೆಂಟರ್) ಯಿಂದ ಸರಬರಾಜು ಆಗುವ ಪಡಿತರ ಅಂಗನವಾಡಿ ಕೇಂದ್ರಗಳಿಗೆ ತಲುಪುತ್ತದೆ. ಒಂದು ಕೆಜಿ ಅಕ್ಕಿಯಲ್ಲಿ 50 ಗ್ರಾಂ ನಷ್ಟು ವಿಟಮಿನ್ ಅಕ್ಕಿಯನ್ನು ಬೆರೆಸಲಾಗುತ್ತದೆಯಂತೆ. ಈ ರೀತಿ ಬೆರಸಲಾದ ಅಕ್ಕಿಯನ್ನು ಅಂಗನವಾಡಿಯಿಂದ ವಿತರಣೆ ಮಾಡಲಾಗಿದೆ.
ಪ್ಲಾಸ್ಟಿಕ್ ಅಕ್ಕಿ ಮಿಶ್ರಣದ ಸಂಗತಿ ಕೇಳುತ್ತಿದ್ದಂತೆ ಬೆಚ್ಚಿಬಿದ್ದ ಸಿಡಿಪಿಒ ನಿರ್ಮಲಾ ತಮ್ಮ ಸಿಬ್ಬಂದಿ ಜತೆ ಬೆಳ್ಳೂಡಿ ಗ್ರಾಮಕ್ಕೆ ದೌಡಾಯಿಸಿ ಅಕ್ಕಿಯನ್ನು ಪರಿಶೀಲನೆ ಮಾಡಿದ್ದಾರೆ. ಅಲ್ಲೇ ಒಂದು ಪಾತ್ರೆ ತರಿಸಿ ಎರಡೂ ಬೇರೆ ಬೇರೆ ಅಕ್ಕಿಯಿಂದ ಪ್ರತ್ಯೇಕ ಅನ್ನ ತಯಾರಿಸಿಯೂ ಪರಿಶೀಲಿಸಿದ್ದಾರೆ.
ಹೊಸದಾಗಿ ಸರ್ಕಾರದಿಂದ ಅಕ್ಕಿ ಸರಬರಾಜು ಆಗಿದೆ. ಅದರಲ್ಲಿ ಪೌಷ್ಠಿಕಾಂಶವುಳ್ಳ ಹಾಲು, ಫೋರ್ಟಿಫೈಡ್ ರೈಸ್ ಮಿಕ್ಸ್ ಮಾಡಿದ್ದಾಗಿ ತಿಳಿಸಿದರು. ಇದು ಪ್ಲಾಸ್ಟಿಕ್ ಅಕ್ಕಿಯಲ್ಲ. ಆದರೂ, ಗ್ರಾಮಸ್ಥರ ಅನುಮಾನ ಪರಿಹಾರಕ್ಕಾಗಿ ಶಿವಮೊಗ್ಗದ ಲ್ಯಾಬ್‌ಗೆ ಕಳುಹಿಸಿ ಪರೀಕ್ಷೆ ನಡೆಸುವುದಾಗಿ ತಿಳಿಸಿದರು. ಇದೇ ಅಕ್ಕಿ ಹರಿಹರ ತಾಲೂಕಿನ ಸಾಕಷ್ಟು ಕಡೆ ಸರಬರಾಜು ಆಗಿದೆ. ಗರ್ಭಿಣಿಯರು ಹಾಗೂ ಬಾಣಂತಿಯರು ಸೇವಿಸಿದ್ದರೂ ಯಾವುದೇ ತೊಂದರೆಯಾಗಿಲ್ಲ ಎಂಬುದು ಸಿಡಿಪಿಒ ನಿರ್ಮಲಾ ಸ್ಪಷ್ಟನೆ ನೀಡಿದ್ದಾರೆ.
ಅದು ಪ್ಲಾಸ್ಟಿಕ್ ಅಕ್ಕಿ ಅಲ್ಲ. ಬದಲಾಗಿ ಪೌಷ್ಟಿಕಾಂಶ ಉಳ್ಳ ಪದಾರ್ಥಗಳ ಮಿಶ್ರಣ ಉಳ್ಳ ಫೋರ್ಟಿಫೈಡ್ ರೈಸ್ ನೀಡಲಾಗಿದೆ ಎಂದು ಗ್ರಾಮಸ್ಥರಿಗೆ ಸಿಡಿಪಿಓ ಮನವರಿಕೆ ಮಾಡಿದ್ರು ಕೂಡ ಪ್ರಯೋಜನ ಆಗಲಿಲ್ಲ. ಗ್ರಾಮಸ್ಥರ ಮಾತಿಗೆ ಮಣೆ ಹಾಕಿದ ಅಧಿಕಾರಿ ಅಕ್ಕಿಯನ್ನು ಪರೀಕ್ಷೆ ನಡೆಸಲು ಶಿವಮೊಗ್ಗಕ್ಕೆ ರವಾನೆ ಮಾಡಿದ್ದಾರೆ. ಅಲ್ಲಿಂದ ವರದಿ ಬಂದಾಗ ಸತ್ಯಾಸತ್ಯತೆ ಹೊರಬರಲಿದೆ.
ಓದಿ:2011ರ ಕೆಪಿಎಸ್ಸಿ ನೇಮಕಾತಿ ಅಭ್ಯರ್ಥಿಗಳಿಗೆ ಅವಕಾಶ ನೀಡಲು ಕಾನೂನಾತ್ಮಕ ಪರಿಹಾರಕ್ಕೆ ಚಿಂತನೆ; ಸಚಿವ ಮಾಧುಸ್ವಾಮಿ