ದಾವಣಗೆರೆ:ರಾಜ್ಯ ಸರ್ಕಾರದ ಮೇಲೆ ಶೇ 40ರಷ್ಟು ಕಮಿಷನ್ ಆರೋಪ ಕೇಳಿ ಬರುತ್ತಿದೆ. ಈ ಆರೋಪಕ್ಕೆಲ್ಲ ಕಾರಣ ದಾವಣಗೆರೆ ಮಹಾನಗರ ಪಾಲಿಕೆಯ ಮ್ಯಾನೇಜರ್ ಮೇಲೆ ನಡೆದ ಲೋಕಾಯುಕ್ತ ದಾಳಿ. ಹೌದು, ವೆಂಕಟೇಶ್ ದಾವಣಗೆರೆ ಮಹಾನಗರ ಪಾಲಿಕೆ ಕಚೇರಿಯ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಇಡೀ ಪಾಲಿಕೆ ಆಡಳಿತದ ಸೂತ್ರದಾರರಾಗಿದ್ದಾರೆ.
ಇಲ್ಲಿ ಜಕಾತಿ ಟೆಂಡರ್ ನೀಡಲು ಕೃಷ್ಣಪ್ಪ ಎಂಬುವರಿಂದ 7 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಇದರಲ್ಲಿ ಈಗಾಗಲೇ ಎರಡು ಲಕ್ಷ ರೂಪಾಯಿ ಅಡ್ವಾನ್ಸ್ ಪಡೆದಿದ್ದ. ಮೂರು ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಎಸ್ಪಿ ಎಂ ಎಸ್ ಕೌಲಾಪುರೆ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಇದರಿಂದ ಇಡಿ ಮಹಾನಗರ ಪಾಲಿಕೆಯ ಕರ್ಮಕಾಂಡ ಬೆಳಕಿಗೆ ಬಂದಿದೆ.
'ಪಾಲಿಕೆಯಲ್ಲಿ ಪ್ರತಿಯೊಂದಕ್ಕೂ ದುಡ್ಡು ಕೊಡಬೇಕು. ಯಾರದ್ದೇ ಕೆಲಸ ಆಗಬೇಕಿದ್ದರೆ ಹಣ ಕೊಡಲೇಬೇಕು. ಇಂತಹ ಕರ್ಮಕಾಂಡವನ್ನ ಲೋಕಾಯುಕ್ತರು ಬೆಳಕಿಗೆ ತಂದಿದ್ದಾರೆ' ಎಂದು ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಮಣಿಕಂಠ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.