ದಾವಣಗೆರೆ:ದಂತ ವೈದ್ಯಧಿಕಾರಿಯ ಸರ್ಕಾರಿ ಹುದ್ದೆ ಕೊಡಿಸುವುದಾಗಿ ನಂಬಿಸಿ ಇಬ್ಬರು ಖಾಸಗಿ ದಂತ ವೈದ್ಯರಿಗೆ ಬರೋಬ್ಬರಿ 7.54 ಲಕ್ಷ ವಂಚಿಸಿರುವ ಆರೋಪ ಪ್ರಕರಣ ದಾವಣಗೆರೆ ನಗರದಲ್ಲಿ ಹಲವು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ನಗರದ ಸಂತೋಷ್ ದಂತ ಚಿಕಿತ್ಸಾಲಯದ ವೈದ್ಯ ಡಾ.ಕೆ ವಿ ಸಂತೋಷ್ ಮತ್ತು ಮತ್ತೋರ್ವ ದಂತ ವೈದ್ಯ ಡಾ.ಮೊಹ್ಮದ್ ಇಮ್ರಾನುಲ್ಲಾ ಮೋಸ ಹೋದವರು. ದಾವಣಗೆರೆ ತಾಲೂಕಿನ ಹೂವಿನಮಡು ಗ್ರಾಮದ ವೈದ್ಯಧಿಕಾರಿ ಡಾ.ಭುವನೇಶ್ ನಾಯ್ಕ ಹಾಗೂ ಕಾಲೇಜ್ ಆಫ್ ಡೆಂಟಲ್ ಸೈನ್ಸ್ನ ಉಪನ್ಯಾಸಕ ಡಾ.ಸತ್ಯ ಪ್ರಸಾದ್ ಮೋಸ ಮಾಡಿದ ಆರೋಪಿಗಳು. ಇವರಿಬ್ಬರ ವಿರುದ್ಧ ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:1 ರೂಪಾಯಿ ಚಿಲ್ಲರೆ ನೀಡದ ಕಂಡಕ್ಟರ್: ಪ್ರಯಾಣಿಕನಿಗೆ ₹3 ಸಾವಿರ ಪರಿಹಾರ ನೀಡಲು ಬಿಎಂಟಿಸಿಗೆ ಕೋರ್ಟ್ ಆದೇಶ
ಪ್ರಕರಣ ಹಿನ್ನೆಲೆ.. 2020ರ ಸೆಪ್ಟೆಂಬರ್ನಲ್ಲಿ ಸರ್ಕಾರದಿಂದ ದಂತ ವೈದ್ಯಾಧಿಕಾರಿಗಳ ನೇಮಕಗಳ ಹುದ್ದೆಗೆ ಅರ್ಜಿ ಕರೆಯಲಾಗಿತ್ತು. ಆಗ ವೈದ್ಯರಾದ ಸಂತೋಷ್ ಮತ್ತು ಮೊಹ್ಮದ್ ಇಬ್ಬರು ಕೂಡ ಅರ್ಜಿ ಸಲ್ಲಿಸಿದ್ದರು. ಈ ವೇಳೆ ನನಗೆ ಭುವನೇಶ್ ನಾಯ್ಕ್ ಎಂಬುವವರ ಪರಿಚಯವಿದೆ. ಅವರಿಗೆ ದೊಡ್ಡ ದೊಡ್ಡ ಅಧಿಕಾರಿಗಳು ಮತ್ತು ರಾಜಕಾರಣಿಗಳ ಸಂಪರ್ಕವಿದೆ. ಈ ಹುದ್ದೆಗೆ ಆಯ್ಕೆ ಮಾಡಲು ಹತ್ತು ಲಕ್ಷವಾಗುತ್ತದೆ ಎಂದು ವೈದ್ಯ ಸಂತೋಷ್ ಅವರಿಂದ ಸ್ನೇಹಿತರೂ ಆದ ಸತ್ಯಪ್ರಸಾದ್ ಮುಂಗಡವಾಗಿ ಐದು ಲಕ್ಷ ವಸೂಲಿ ಮಾಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.