ಕೋವಿಡ್ ಪರಿಸ್ಥಿತಿ ಎದುರಿಸಲು ಸರ್ವರೂ ಸನ್ನದ್ಧರಾಗಿ: ಡಿಸಿ ಕರೆ - ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ
ಹಾಟ್‍ಸ್ಪಾಟ್ ಜಿಲ್ಲೆಗಳಾದ ಬೆಂಗಳೂರು, ಮೈಸೂರು, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಚಿಕ್ಕಬಳ್ಳಾಪುರ, ಬೀದರ್, ಮಂಗಳೂರಿನಿಂದ ಲಾಕ್‍ಡೌನ್ ಆದ ನಂತರ ಯಾರಾದರೂ ಜಿಲ್ಲೆಗೆ ಆಗಮಿಸಿದ್ದರೆ ಅಂತವರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇದ್ದಲ್ಲಿ, ಸಹಾಯವಾಣಿ 1077 ಗೆ ಅಥವಾ 104 ಗೆ ನೀಡಬೇಕು ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮನವಿ ಮಾಡಿದ್ದಾರೆ.
ದಾವಣಗೆರೆ:ಜಿಲ್ಲೆಯಲ್ಲಿ ಸದ್ಯಕ್ಕೆ ಯಾವುದೇ ಪಾಸಿಟಿವ್ ಪ್ರಕರಣ ಇಲ್ಲದಿದ್ದರೂ, ಸರ್ಕಾರದ ಆದೇಶದಂತೆ ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಿಸಿದ ಎಲ್ಲಾ ಇಲಾಖೆಗಳು ಅಗತ್ಯಕ್ಕಿಂತ ಹೆಚ್ಚಾಗಿ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದ್ದಾರೆ.
ಜಿಲ್ಲಾಡಳಿತ ಕಚೇರಿಯಲ್ಲಿ ಕೋವಿಡ್ 19 ಹಿನ್ನೆಲೆ ಅಧಿಕಾರಿಗಳೊಂದಿಗೆ ನಡೆಸಲಾದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರೋಗ್ಯ ಇಲಾಖೆಯಿಂದ ಕೋವಿಡ್ ಆಸ್ಪತ್ರೆಯಾಗಿರುವ ಜಿಲ್ಲಾಸ್ಪತ್ರೆಯಲ್ಲಿ 200 ಸೋಂಕಿತರಿಗಾಗುವಷ್ಟು ಬೆಡ್‍ಗಳ ಸಿದ್ದತೆ ಮಾಡಲಾಗಿದೆ. ಜಿಲ್ಲಾ ಶಸ್ತ್ರ ಚಿಕಿತ್ಸಕರು ಆದಷ್ಟು ಬೇಗ ಇದರ ಸಿದ್ದತೆ ಸಂಪೂರ್ಣಗೊಳಿಸಬೇಕು ಎಂದಿದ್ದಾರೆ.
ವಲಸೆ ಕಾರ್ಮಿಕರು ತಮ್ಮ ಕೆಲಸದ ಸ್ಥಳಗಳಿಗೆ ತೆರಳುವ ವೇಳೆ ದಾವಣಗೆರೆಯಲ್ಲಿ ಸಿಕ್ಕಿಹಾಕಿಕೊಂಡಿದ್ದು, ಇದೀಗ ಅವರು ತಮ್ಮ ಕೆಲಸದ ಸ್ಥಳಗಳಿಗೆ ಮರಳಲು ಇಚ್ಚಿಸಿದ್ದಲ್ಲಿ ತಹಶೀಲ್ದಾರರು, ಕಾರ್ಮಿಕ ಅಧಿಕಾರಿಗಳ ಸಹಯೋಗದೊಂದಿಗೆ ಪಟ್ಟಿ ಮಾಡಿ ನೀಡಿದಲ್ಲಿ, ಜಿಲ್ಲಾಡಳಿತದ ವತಿಯಿಂದ ವಲಸಿಗ ಕಾರ್ಮಿಕರ ಕೆಲಸದ ಸ್ಥಳಗಳಿಗೆ ಬಿಡುವ ವ್ಯವಸ್ಥೆ ಮಾಡಲಾಗುವುದು ಎಂದರಲ್ಲದೇ, ಜಿಲ್ಲೆಯಲ್ಲಿರುವ ಎಲ್ಲ ವಲಸೆ ಕಾರ್ಮಿಕರ ಶಿಬಿರಗಳಲ್ಲಿನ ಕಾರ್ಮಿಕರಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸಬೇಕು. ಆಪ್ತ ಸಮಾಲೋಚನೆಯನ್ನು ನಡೆಸಬೇಕು. ಆಹಾರದ ಕಿಟ್‍ಗಳನ್ನು ಸಮರ್ಪಕವಾಗಿ ವಿತರಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ, ನಗರದ ಏಳು ಚೆಕ್ಪೋಸ್ಟ್ಗಳಲ್ಲಿ ಲಾರಿ ಡ್ರೈವರ್ ಮತ್ತು ಸಿಬ್ಬಂದಿ ಆರೋಗ್ಯ ತಪಾಸಣೆ ತಪ್ಪದೇ ಆಗಬೇಕು. ಹೆಬ್ಬಾಳು ಚೆಕ್‍ಪೋಸ್ಟ್ ನಲ್ಲಿ ಆರೋಗ್ಯ ತಪಾಸಣೆ ನಡೆಯುತ್ತಿಲ್ಲ. ಹಾಗೂ ಅಲ್ಲಿನ ಚೆಕ್‍ಪೋಸ್ಟ್ ಸಿಬ್ಬಂದಿ ಕೂಡ ಸಮರ್ಪಕವಾಗಿ ಕೆಲಸ ಮಾಡಬೇಕೆಂದು ಸೂಚಿಸಿದರು.