ದಾವಣಗೆರೆ:ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ (ಪಿಜಿ-ಸಿಇಟಿ) ಮತ್ತು ಡಿಪ್ಲೊಮಾ ಸಾಮಾನ್ಯ ಪ್ರವೇಶ ಪರೀಕ್ಷೆ (ಡಿ-ಸಿಇಟಿ) ಅ.13 ಹಾಗೂ 14 ರಂದು ನಡೆಯಲಿದ್ದು, ಯಾವುದೇ ಅಕ್ರಮ, ಗೊಂದಲ ಇಲ್ಲದ ಹಾಗೆ ಕೋವಿಡ್ ನಿಯಂತ್ರಣ ಮಾರ್ಗಸೂಚಿ ಅನುಸರಿಸಿ ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸುವಂತೆ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಪಿಜಿ-ಸಿಇಟಿ ಮತ್ತು ಡಿ-ಸಿಇಟಿ ಪರೀಕ್ಷೆ ನಡೆಸುವ ಕುರಿತು ಜಿಲ್ಲಾಡಳಿತ ಭವನದ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪರೀಕ್ಷಾ ಕೇಂದ್ರಗಳ ಕೊಠಡಿಗಳಿಗೆ ಸೋಂಕು ನಿವಾರಕದಿಂದ ಸ್ಯಾನಿಟೈಸ್ ಮಾಡಿಸಬೇಕು. ಪ್ರತಿ ಕೊಠಡಿಯಲ್ಲಿ ಗರಿಷ್ಠ 24 ವಿದ್ಯಾರ್ಥಿಗಳಿಗೆ ಮಾತ್ರ ಆಸನ ವ್ಯವಸ್ಥೆ ಕಲ್ಪಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು.
ಮಾಸ್ಕ್ ಧರಿಸುವುದು ಕಡ್ಡಾಯ :
ಪರೀಕ್ಷಾ ಕೇಂದ್ರದಲ್ಲಿ ಸ್ಯಾನಿಟೈಸರ್ ಹಾಗೂ ಸೋಪ್ ಲಿಕ್ವಿಡ್ ವ್ಯವಸ್ಥೆ ಮಾಡಬೇಕು. ಕೋವಿಡ್ ರೋಗ ಲಕ್ಷಣ ಹೊಂದಿರುವವರಿಗೆ ಹಾಗೂ ಕಂಟೈನ್‍ಮೆಂಟ್ ವಲಯದಿಂದ ಬರುವ ಅಭ್ಯರ್ಥಿಗಳಿಗಾಗಿ ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ 2 ಹೆಚ್ಚುವರಿ ಕೊಠಡಿಗಳನ್ನು ಕಾಯ್ದಿರಿಸಬೇಕು. ಪ್ರತಿಯೊಬ್ಬರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಆರೋಗ್ಯ ಕಾರ್ಯಕರ್ತರನ್ನು ನೇಮಿಸಿ ಅಭ್ಯರ್ಥಿಗಳು, ನಿಯೋಜಿತ ಸಿಬ್ಬಂದಿಗಳ ಥರ್ಮಲ್ ಸ್ಕ್ಯಾನರ್ ಮಾಡಿಸಬೇಕು. ಪರೀಕ್ಷಾ ಪ್ರಕ್ರಿಯೆ ಸಲುವಾಗಿ ಮುಂಜಾಗ್ರತೆಗಾಗಿ ಒಂದು ಆಂಬ್ಯುಲೆನ್ಸ್ ನಿಯೋಜಿಸಬೇಕು ಎಂದು ತಿಳಿಸಿದರು.
ಪ್ರಶ್ನೆಪತ್ರಿಕೆ ಮತ್ತು ಉತ್ತರ ಪತ್ರಿಕೆಗಳನ್ನು ಸಾಗಾಣಿಕೆ ಮಾಡುವ ಹೊಣೆಯನ್ನು ಮಾರ್ಗಾಧಿಕಾರಿಗಳಿಗೆ ನೀಡಲಾಗಿದ್ದು, ಇದರಲ್ಲಿ ಯಾವುದೇ ಲೋಪದೋಷಗಳಾಗಬಾರದು. ಜಾಗೃತ ದಳಕ್ಕಾಗಿ ಅಧಿಕಾರಿಗಳನ್ನು ನಿಯೋಜಿಸಬೇಕು. ಪರೀಕ್ಷೆಗಳನ್ನು ನ್ಯಾಯಬದ್ಧವಾಗಿ ನಡೆಸುವ ಸಂಬಂಧ ಪರೀಕ್ಷೆಗಳು ನಡೆಯುವ ದಿನದಂದು ಕೇಂದ್ರಗಳ ಸುತ್ತ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಇದರನ್ವಯ ನಿಷೇಧಿತ ಅವಧಿಯಲ್ಲಿ ಈ ವ್ಯಾಪ್ತಿಯಲ್ಲಿನ ಎಲ್ಲಾ ಜೆರಾಕ್ಸ್ ಅಂಗಡಿಗಳು, ಸೈಬರ್ ಕೆಫೆಗಳು ಮುಚ್ಚಲಿವೆ ಎಂದು ಅಪರ ಜಿಲ್ಲಾಧಿಕಾರಿ ಹೇಳಿದರು.
ಬಳಿಕ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾಗರಾಜ್ ಮಾತನಾಡಿ ಎಂಟೆಕ್, ಎಂಸಿಎ, ಎಂಬಿಎ ಸೇರಿದಂತೆ ವಿವಿಧ ಕೋರ್ಸ್‌ಗಳ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ ಅ. 13 ಮತ್ತು 14 ರಂದು ಬೆಳಿಗ್ಗೆ 10.30 ರಿಂದ 12.30 ರವರೆಗೆ ಹಾಗೂ ಮಧ್ಯಾಹ್ನ 2.30 ರಿಂದ 4. 30ರವರೆಗೆ ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡಿರುವ ವಿಷಯಗಳಿಗೆ ಅನುಸಾರವಾಗಿ ನಗರದ ಸಿದ್ದಗಂಗಾ ವಿಜ್ಞಾನ ಪ.ಪೂ. ಕಾಲೇಜು, ಪಿಜೆ ಬಡಾವಣೆಯ ಸೆಂಟ್ ಪಾಲ್ ಪ.ಪೂ. ಕಾಲೇಜು, ಶಿವಕುಮಾರಸ್ವಾಮಿ ಬಡಾವಣೆಯ ಸೆಂಟ್ ಜಾನ್ ಪ.ಪೂ. ಕಾಲೇಜು, ಹಾಗೂ ಆರ್.ಸೀತಮ್ಮ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಡಿಪ್ಲೊಮೊ ಸಾಮಾನ್ಯ ಪರೀಕ್ಷೆ ಅ. 14 ರಂದು ಬೆಳಿಗ್ಗೆ 10 ಗಂಟೆಯಿಂದ 1 ಗಂಟೆಯವರೆಗೆ ನಗರದ ಮೋತಿ ವೀರಪ್ಪ ಸರ್ಕಾರಿ ಪ.ಪೂ. ಕಾಲೇಜು, ಬಾಲಕರ ಸರ್ಕಾರಿ ಪ.ಪೂ. ಕಾಲೇಜು, ವಿವೇಕಾನಂದ ಬಡಾವಣೆಯ ಎಸ್‍ಪಿಎಸ್‍ಎಂ ಪ.ಪೂ. ಕಾಲೇಜು, ಸೇರಿದಂತೆ ಒಟ್ಟು 3 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಒಟ್ಟು 1,220 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಕೋವಿಡ್ ನಿಯಂತ್ರಣ ಮಾರ್ಗಸೂಚಿ ಪಾಲನೆಯಾಗುವ ಬಗ್ಗೆ ಅಧೀಕ್ಷಕರು ನಿಗಾ ವಹಿಸಬೇಕು. ಒಟ್ಟಾರೆ ಪರೀಕ್ಷೆ ಪ್ರಕ್ರಿಯೆ ಕಾನೂನು ಹಾಗೂ ನ್ಯಾಯಬದ್ಧವಾಗಿ ನಡೆಸಿರುವ ಬಗ್ಗೆ ಪರೀಕ್ಷಾ ವೀಕ್ಷಕರು ಪ್ರಮಾಣಪತ್ರವನ್ನು ಜಿಲ್ಲಾಡಳಿತ ಹಾಗೂ ಪರೀಕ್ಷಾ ಪ್ರಾಧಿಕಾರಕ್ಕೆ ಸಲ್ಲಿಸಬೇಕು ಎಂದು ಹೇಳಿದರು.