ದಾವಣಗೆರೆ:ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಟ ಹಾಗೂ ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಏಕೆ ಸ್ಪರ್ಧಿಸುತ್ತಿಲ್ಲ ಅನ್ನೋದು ಯಾರಿಗಾದರೂ ಗೊತ್ತಾ? ಈ ಪ್ರಶ್ನೆಗೆ ಸ್ವತಃ ಅವರೇ ಉತ್ತರ ಕೊಟ್ಟಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಪೇಂದ್ರ, ನಾನು ಚುನಾವಣೆಗೆ ಸ್ಪರ್ಧಿಸಿದರೆ ರಾಜ್ಯದ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಉತ್ತಮ ಪ್ರಜಾಕೀಯ ಪಕ್ಷದ ಪರ ಯಾರು ಪ್ರಚಾರ ನಡೆಸುತ್ತಾರೆ? ನಾನೇ ಎಲ್ಲಾ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಬೇಕು. ಈ ಹಿನ್ನೆಲೆಯಲ್ಲಿ ಚುನಾವಣಾ ಅಖಾಡಕ್ಕೆ ಧುಮುಕಿಲ್ಲ ಎಂದು ಹೇಳುವ ಮೂಲಕ ಚುನಾವಣೆಗೆ ಯಾಕೆ ತಾವು ಸ್ಪರ್ಧಿಸಲಿಲ್ಲ ಅನ್ನೋದನ್ನ ಬಹಿರಂಗಪಡಿಸಿದರು.
ಸಿನಿಮಾದವರಿಂದ ಬದಲಾವಣೆಯಾಗದು :
ಸಿನಿಮಾ ಕಲಾವಿದರು ಪ್ರಚಾರಕ್ಕೆ ಬಂದು ಹೇಳಿದರೆ ಬದಲಾವಣೆ ಆಗದು. ಆಗ ನಮ್ಮ ಸ್ವಂತಿಕೆ ಏನೂ ಇರುವುದಿಲ್ಲ. ಉಪೇಂದ್ರ ಎಲ್ಲಿ ಸ್ಪರ್ಧಿಸುತ್ತಾರೆ, ಪ್ರಿಯಾಂಕಾ ಎಲ್ಲಿ ಸ್ಪರ್ಧಿಸುತ್ತಾರೆ ಎಂಬುದು ಮುಖ್ಯವಲ್ಲ. ಬದಲಾವಣೆ ಆಗಬೇಕು. ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವವರು ಆಯ್ಕೆಯಾಗಬೇಕು. ಕೆಲಸ ಮಾಡುವವರು ಆರಿಸಿ ಬರಬೇಕು ಎಂಬ ಅಪೇಕ್ಷೆ ನಮ್ಮದು. ಇದೆಲ್ಲಾ ಆದಷ್ಟು ಬೇಗ ಆಗದು ಎಂಬುದು ಗೊತ್ತಿದೆ. ಆದರೆ, ಸಾಕಷ್ಟು ಸಮಯಾವಕಾಶ ಬೇಕು. ನಮ್ಮಿಂದಾಗದು ಎಂದರೆ ಆಗದು. ಪ್ರಯತ್ನಪಟ್ಟರೆ ಎಲ್ಲವೂ ಸುಲಭವಾಗುತ್ತದೆ ಎಂದು ಉಪೇಂದ್ರ ಹೇಳಿದರು.
ಬಳ್ಳಾರಿಯಲ್ಲಿ ಮಾತ್ರ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಕಣಕ್ಕಿಳಿಸಿಲ್ಲ. ಮಂಡ್ಯದಲ್ಲಿ ನಾವು ಅಭ್ಯರ್ಥಿ ಕಣಕ್ಕಿಳಿಸಿದ್ದೇವೆ. ಅಲ್ಲಿ ಬೇರೆಯವರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನಮ್ಮ ಪಕ್ಷದ ಅಭ್ಯರ್ಥಿಗಳೇ ನಮಗೆ ಮುಖ್ಯ. ಹಾಗಾಗಿ ನಾನು ಅಖಾಡಕ್ಕೆ ಧುಮುಕಿಲ್ಲ. ಹೋದ ಕಡೆಗಳಲ್ಲಿ ಪಕ್ಷದ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿದ್ದು, ಇದು ಖುಷಿ ತಂದಿದೆ ಎಂದರು.