ದಾವಣಗೆರೆ:ಅಪ್ಪು ವಿಧಿವಶರಾಗಿದ್ದು ನಮಗೆ ದೊಡ್ಡ ಆಘಾತಕಾರಿ ಸಂಗತಿ ಎಂದು ನಟ, ನಿರ್ದೇಶಕ ರಮೇಶ್ ಅರವಿಂದ್ ಬೇಸರ ವ್ಯಕ್ತಪಡಿಸಿದರು.
'ಅಪ್ಪು ಸಾವಿಗೂ ಜಿಮ್‌ಗೂ ಏನೂ ಸಂಬಂಧವಿಲ್ಲ'
ನಗರದಲ್ಲಿಂದು ಮಾತನಾಡಿದ ಅವರು, ಆರೋಗ್ಯ ಕಾಪಾಡಿಕೊಳ್ಳಲು ಜಿಮ್‌ಗೆ ಹೋಗಬೇಕೆಂದಿಲ್ಲ, ಮನೆಯಲ್ಲೇ ಸಣ್ಣಪುಟ್ಟ ವ್ಯಾಯಾಮ ಮಾಡಿದರೆ ಸಾಕು. ಬೇಸಿಕ್ ಫಿಟ್ನೆಸ್ ಎಲ್ಲರಿಗೂ ಅವಶ್ಯಕ ಎಂದರು. ಇದೇ ವೇಳೆ, ಅಪ್ಪು ಸಾವಿಗೂ ಜಿಮ್‌ಗೂ ಏನೂ ಸಂಬಂಧವಿಲ್ಲ ಎಂದು ಹೇಳಿದರು.
ನಮ್ಮ ಕನಸುಗಳನ್ನು ಈಡೇರಿಸುವ ಸಾಧನ ದೇಹ, ಆ ದೇಹವನ್ನು ಆರೋಗ್ಯಯುತವಾಗಿ ಕಾಪಾಡಿಕೊಳ್ಳುವುದು ಎಲ್ಲರ ಕರ್ತವ್ಯ. ಆರೋಗ್ಯವಂತ ದೇಹಕ್ಕಾಗಿ ಜಿಮ್‌ಗೆ ಹೋಗಬೇಕಾದ ಅಗತ್ಯವಿಲ್ಲ, ಸರಳವಾದ ಎಕ್ಸಸೈಜ್ ಮಾಡಿದ್ರೂ ಸಾಕು, ಎಲ್ಲರೂ ದೇಹದ ಆರೋಗ್ಯ ಕಾಪಾಡಿಕೊಂಡರೆ, ಒಳ್ಳೆಯದು ಎಂದು ಸಲಹೆ ನೀಡಿದರು.
ನಟನೆಯ ಜೊತೆಗೆ ನಿರ್ದೇಶನ ಮಾಡಿರುವ '100' ಚಿತ್ರದ ಪ್ರಮೋಷನ್‌ಗಾಗಿ ದಾವಣಗೆರೆಗೆ ಭೇಟಿ ನೀಡಿದ ರಮೇಶ್ ಅರವಿಂದ್, ಇದೇ 19 ರಂದು ತೆರೆ ಕಾಣಲಿರುವ ಈ ಚಿತ್ರಕ್ಕೆ 100 ಎಂದು ಹೆಸರಿಡಲು ಕಾರಣ ಪೊಲೀಸ್ ಸಹಾಯವಾಣಿ ನಂಬರ್ ಎಂದು ತಿಳಿಸಿದರು.
ಇದೊಂದು ಪ್ರತಿಯೊಂದು ಕುಟುಂಬದ ಕಥೆ. ಇಂದು ಪ್ರತಿಯೊಬ್ಬರೂ ಸಹ ಮೊಬೈಲ್‌ನಲ್ಲಿ ಬ್ಯುಸಿ ಇದ್ದಾರೆ, ತಂತ್ರಜ್ಞಾನ ನಮ್ಮನ್ನು ಕೊಲ್ಲುತ್ತಿದೆ, ಒಳ್ಳೆಯ ಕೈಗೆ ಚಾಕು ಸಿಕ್ಕರೆ ಅದು ಅಗತ್ಯಕ್ಕೆ ತಕ್ಕಂತೆ ಬಳಕೆ ಆಗುತ್ತದೆ. ಅದೇ ಇಂದಿನ ತಂತ್ರಜ್ಞಾನ ಪರಿಸ್ಥಿತಿ. ಇದೇ ನಮ್ಮ ಚಿತ್ರದ ಕಥೆ ಎಂದು ರಮೇಶ್ ಅರವಿಂದ್ ಸೂಚ್ಯವಾಗಿ ಹೇಳಿದರು.