ದಾವಣಗೆರೆ:ರಾಝೀಕ್ ಉಲ್ಲಾ ಇವರು ಜಿಲ್ಲೆಯ ಹರಿಹರ ತಾಲೂಕಿನ ಮಲೇಬೆನ್ನೂರು ಗ್ರಾಮದವರು. ಬಡತನವಿರುವ ಕುಟುಂಬದಲ್ಲಿ ಜನಿಸಿ, ಈಗ ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದಾರೆ. ಇವರು ಎಂಎ ಇಂಗ್ಲಿಷ್ನಲ್ಲಿ ಯೂನಿವರ್ಸಿಟಿ ಟಾಪರ್ ಆಗಿ, ಎರಡು ಚಿನ್ನದ ಪದಕ ಗೆದ್ದಿದ್ದಾರೆ.
ತಂದೆ ಕಷ್ಟ ನೋಡಲಾಗದೇ ಕೆಲಸಕ್ಕೆ ಹೋದ ಮಗ: ಜಮಾಲ್ದೀನ್ ಸಾಬ್ ಹಾಗೂ ಶಕೀಲಾ ಬಾನು ದಂಪತಿ ಪುತ್ರ ರಾಝೀಕ್ ಉಲ್ಲಾ. ಜಮಾಲ್ದೀನ್ ಸಾಬ್ ಗಾರೆ ಕೆಲಸ ಮಾಡುತ್ತಿದ್ದರು. ದಿನವಿಡೀ ಕಷ್ಟಪಟ್ಟರೂ ಮನೆಯ ಆರು ಮಂದಿಗೆ ಊಟ ಹಾಕಲು ಅವರು ಹರಸಾಹಸ ಪಡುತ್ತಿದ್ದರು. ರಾಝೀಕ್ಗೆ ತಂದೆಯ ಕಷ್ಟ ನೋಡಲಾಗಲಿಲ್ಲ. ಹಾಗಾಗಿ ಅವನೂ ಕೆಲಸಕ್ಕೆ ಹೋಗತೊಡಗಿದ. ದಿನವಿಡೀ ಗಾರೆ ಕೆಲಸ ಮಾಡ ತೊಡಗಿದ. ಆದ್ರೆ ಶಿಕ್ಷಣವನ್ನು ಮುಂದುವರಿಸಬೇಕು ಎಂಬುದು ಆತನ ಆಸೆಯಾಗಿತ್ತು. ಹೀಗಾಗಿ ಕೆಲಸ ಮಾಡುತ್ತಲೇ ವಿದ್ಯಾಭ್ಯಾಸ ಮುಂದುವರಿಸಿದ.