ದಾವಣಗೆರೆ:ಶೀಲ ಶಂಕಿಸಿಹೆಂಡತಿ ಮತ್ತು ಮಗುವನ್ನು ಕೊಲೆ ಮಾಡಿದ್ದ ಆರೋಪಿಗೆ ದಾವಣಗೆರೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವತಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ಮಾಯಕೊಂಡ ಗ್ರಾಮದ ಆರೋಪಿ ನಾಗರಾಜ್ ಶಿಕ್ಷೆಗೊಳಗಾದ ಆರೋಪಿ.
ಘಟನೆಯ ವಿವರ:ಘಟನೆ ನಡೆಯುವ ಮೂರು ವರ್ಷಗಳ ಹಿಂದೆ ಮೃತ ಶಿಲ್ಪಾ ಹಾಗೂ ನಾಗರಾಜ್ ಮದುವೆಯಾಗಿದ್ದರು. ಇವರಿಗೆ 2 ವರ್ಷದ ಹೆಣ್ಣು ಮಗು ಕೂಡ ಇತ್ತು. ಆದರೆ, ನಾಗರಾಜನು ತನ್ನ ಹೆಂಡತಿಯ ಶೀಲ ಶಂಕಿಸಿ ಮನೆಯಲ್ಲಿ ಪ್ರತಿ ದಿನ ಗಲಾಟೆ ಮಾಡುತ್ತಿರುವುದನ್ನು, 2018ರ ಏಪ್ರಿಲ್ 19ರ ಬೆಳಗಿನ ಜಾವ ಮನೆಯಲ್ಲಿ ಯಾರೂ ಇಲ್ಲದ ವೇಳೆ ನಾಗರಾಜ್ ಪತ್ನಿ ಶಿಲ್ಪಾಳೊಂದಿಗೆ ಜಗಳವಾಡಿದ್ದಾನೆ. ನಂತರ ಅವರ ಮೇಲೆ ಹಲ್ಲೆ ನಡೆಸಿ, ಬಳಿಕ ಹಗ್ಗದಿಂದ ಕುತ್ತಿಗೆಗೆ ಜೋರಾಗಿ ಬಿಗಿದು ಸಾಯಿಸಿ ನೇಣು ಹಾಕಿದ್ದನು. ನಂತರ 2 ವರ್ಷದ ಮಗುವಿನ ಪೋಷಣೆ ಜವಾಬ್ದಾರಿ ತನ್ನ ಮೇಲೆ ಬೀಳುತ್ತದೆ ಎಂದು ಯೋಚಿಸಿ ಪುಟ್ಟ ಕಂದಮ್ಮಳನ್ನು ಕೂಡ ನೇಣು ಹಾಕಿ ಕೊಲೆ ಮಾಡಿದ್ದನು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ತನಿಖಾಧಿಕಾರಿಯಾದ ಗುರುಬಸವರಾಜ್ ಅವರು ಪ್ರಕರಣದ ತನಿಖೆ ಮಾಡಿ ಆರೋಪಿ ನಾಗರಾಜ್ ವಿರುದ್ದ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಿದ ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರವೀಣ್ ಕುಮಾರ್ ಆರ್ಎನ್ ಅವರು ಆರೋಪಿತನ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೀವಿತಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ಅಭಿಯೋಜಕರಾದ ಜಯಪ್ಪ ಕೆಜಿ ಸರ್ಕಾರದ ಪರವಾಗಿ ವಾದ ಮಾಡಿದ್ದಾರೆ.