ದಾವಣಗೆರೆ :ಭ್ರೂಣ ಹತ್ಯೆ ಪ್ರಕರಣ ಸದ್ಯ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಇದರ ಜಾಡು ಹಿಡಿದು ತೆರಳಿರುವ ಆರೋಗ್ಯ ಇಲಾಖೆಯ ಅಧಿಕಾರಿಗಳು ತನಿಖೆಗಿಳಿದಿದ್ದರು. ಇನ್ನು ಈ ಪ್ರಕರಣದಲ್ಲಿ ದಾವಣಗೆರೆ ಮೂಲದ ಇಬ್ಬರು ಪ್ರಮುಖ ಆರೋಪಿಗಳು ಶಾಮಿಲಾಗಿರುವುದು ಬೆಳಕಿಗೆ ಬಂದಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ವೀರೇಶ್ (36) ಎಂಬ ಆರೋಪಿಯನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ. ಇನ್ನು ಮತ್ತೋರ್ವ ತಲೆಮರೆಸಿಕೊಂಡಿದ್ದು, ಪೊಲೀಸರು ಬಲೆ ಬೀಸಿದ್ದಾರೆ.
2019ರಲ್ಲಿ ಲಿಂಗರಾಜ ಎಂಬಾತನನ್ನು ಅಪಹರಿಸಿ 30 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಆರೋಪ ಇವರಿಬ್ಬರ ಮೇಲಿದೆ. ಇನ್ನು ಮೈಸೂರಿನಲ್ಲಿರುವ ಚಿಕ್ಕಪ್ಪ ಮಲ್ಲಿಕಾರ್ಜುನಪ್ಪ ಅವರ ಕ್ಲಿನಿಕ್ ಅನ್ನು ಬಂಧಿತ ಆರೋಪಿ ವೀರೇಶ್ ನೋಡಿಕೊಳ್ಳುತ್ತಿದ್ದ. ವೀರೇಶ್ ಜೊತೆ ಅದೇ ಗ್ರಾಮದ ಇನ್ನೋರ್ವ ವ್ಯಕ್ತಿ ಪ್ರಕರಣದಲ್ಲಿ ಭಾಗಿಯಾಗಿದ್ದ. ಬಹುದಿನಗಳಿಂದ ಕ್ಯಾಸನಕೆರೆ ಗ್ರಾಮ ತೊರೆದಿದ್ದ ಆರೋಪಿ ವೀರೇಶ್ ಹಾಗೂ ಮತ್ತೋರ್ವ ಆರೋಪಿ ಭ್ರೂಣ ಹತ್ಯೆ ಡೀಲಿಂಗ್ನಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಲೆಮರೆಸಿಕೊಂಡ ಆರೋಪಿ ವಾರಕ್ಕೊಮ್ಮೆ ಮೈಸೂರಿಗೆ ಹಾಗೂ ಬೆಂಗಳೂರಿಗೆ ಹೋಗುತ್ತಿದ್ದನು. ಯಾವಾಗ ಭ್ರೂಣ ಹತ್ಯೆ ಪ್ರಕರಣ ಬಯಲಿಗೆ ಬಂತೋ ಆಗ ತಲೆಮರೆಸಿಕೊಂಡಿದ್ದಾನೆಂದು ಹೊನ್ನಾಳಿ ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು ದಾವಣಗೆರೆ ಜಿಲ್ಲೆಯಿಂದಲೂ ಏನಾದ್ರು ಗರ್ಭಿಣಿಯರನ್ನು ಕಳಿಸಿದ್ರಾ ಅನ್ನೋ ಬಗ್ಗೆ ಹೊನ್ನಾಳಿ ಪೊಲೀಸರು ತನಿಖೆಗೆ ಇಳಿದಿದ್ದಾರೆ. ಹೆಚ್ಚಿನ ವಿಚಾರ ಇನ್ನಷ್ಟೇ ಹೊರಬರಬೇಕಿದೆ.