ದಾವಣಗೆರೆ: ಎಟಿಎಂ ಕೇಂದ್ರಕ್ಕೆ ಬರುವ ಸಾರ್ವಜನಿಕರಿಗೆ ಹಣ ತೆಗೆದುಕೊಡುವ ನಾಟಕವಾಡಿ ವಂಚಿಸುತ್ತಿದ್ದ ವ್ಯಕ್ತಿಯನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ಮೂಲದ ಯೋಗಾನಂದ ಬಂಧಿತ ಆರೋಪಿ.
ಇಂಗ್ಲಿಷ್ ಎಂಎ ವ್ಯಾಸಂಗ ಮಾಡಿ ಪಿಹೆಚ್ಡಿಯನ್ನೂ ಮುಗಿಸಿರುವ ಈತ ಎಟಿಎಂ ಮುಂದೆ ನಿಂತು ಹಳ್ಳಿ ಜನರು, ವಯಸ್ಸಾದವರನ್ನು ಗುರಿ ಮಾಡಿ ಎಟಿಎಂನಿಂದ ಹಣ ತೆಗೆದುಕೊಡುವ ನಾಟಕವಾಡುತ್ತಿದ್ದ. ಇದೇ ವೇಳೆ ತನ್ನ ಕುಚೋದ್ಯಕ್ಕೆ ಬೀಳುವ ಜನರ ಒರಿಜಿನಲ್ ಎಟಿಎಂ ಕಾರ್ಡ್ ಹಾಗು ಪಿನ್ ಪಡೆದು, ಬದಲಾಯಿಸಿ ಪರಾರಿಯಾಗುತ್ತಿದ್ದ.
ಕಳೆದ ಎರಡು ವರ್ಷಗಳಿಂದ ಕಳ್ಳತನ ಆರಂಭಿಸಿರುವ ಈತ ಇದುವರೆಗೂ 78 ಎಟಿಎಂ ಕಾರ್ಡ್ಗಳನ್ನು ಬದಲಾವಣೆ ಮಾಡಿ ಜನರಿಗೆ ಮೋಸ ಮಾಡಿದ್ದಾನೆ. ಅಕ್ರಮವಾಗಿ ಬದಲಾವಣೆ ಮಾಡಿದ ಎಟಿಎಂ ಕಾರ್ಡ್‌ಗಳಿಂದ ಒಟ್ಟು 8.58 ಲಕ್ಷ ಹಣ ಡ್ರಾ ಮಾಡಿದ್ದಾನೆ ಎಂದು ಎಸ್ಪಿ ಸಿಬಿ ರಿಷ್ಯಂತ್ ತಿಳಿಸಿದರು.