ದಾವಣಗೆರೆ: ಲಾಕ್ಡೌನ್ನಿಂದಾಗಿ ಅದೆಷ್ಟೋ ಬಡ ಕುಟುಂಬಗಳು ನಲುಗಿ ಹೋಗಿವೆ. ದುಡಿಮೆ ಇಲ್ಲದೆ ಜೀವನ ನಡೆಸಲು ದಾರಿ ಕಾಣದೆ ನಾಲ್ಕು ಗೋಡೆಗಳ ನಡುವೆ ಕಣ್ಣೀರು ಹಾಕುವ ಎಷ್ಟೋ ಮಂದಿ ನಮ್ಮ ನಡುವೆ ಇದ್ದಾರೆ. ಅಂದೇ ದುಡಿದು ಅಂದೇ ತಿನ್ನುವವರ ಪರಿಸ್ಥಿತಿಯಂತೂ ಅಯೋಮಯವಾಗಿದೆ.
ಈ ನಡುವೆ ಬೆಣ್ಣೆನಗರಿಯ ಮಹಿಳೆಯರ ತಂಡ ಪರ್ಯಾಯ ಜೀವನ ಮಾರ್ಗವೊಂದನ್ನು ಕಂಡುಕೊಂಡು ಯಶಸ್ವಿಯಾಗಿದೆ.
ಸುಮಾರು 60 ರಷ್ಟು ಮಹಿಳೆಯರು ನಗರದಲ್ಲಿ ಖಾಲಿ ಚೀಲ ಹೊಲಿಯುತ್ತಾ ಜೀವನ ನಡೆಸುತ್ತಿದ್ದರು. ಆದರೆ, ಕೋವಿಡ್ ಬಂದ ಬಳಿಕ ಅವರ ಕೆಲಸಕ್ಕೆ ಸಮಸ್ಯೆಗಳು ಎದುರಾಗಿತ್ತು. ಆ ಸಂದರ್ಭದಲ್ಲಿ ಜೀವನ ನಡೆಸಲು ಪರ್ಯಾಯ ಮಾರ್ಗ ಕಂಡುಕೊಳ್ಳಲು ಮಹಿಳೆಯರು ಮುಂದಾಗಿದ್ದರು.
ಖಾಲಿ ಚೀಲ ಹೊಲಿಯುತ್ತಿದ್ದವರಿಂದ ವೈದ್ಯಕೀಯ ವಸ್ತುಗಳ ತಯಾರಿ ಆಗ ಅವರಿಗೆ ಪಿಪಿಇ ಕಿಟ್ ಸೇರಿದಂತೆ ವೈದ್ಯಕೀಯ ಸಲಕರಣೆಗಳನ್ನು ತಯಾರಿಸುವ ಅವಕಾಶ ಸಿಕ್ಕಿತು. ಸಿಕ್ಕ ಅವಕಾಶವನ್ನು ಬಳಸಿಕೊಂಡ ಮಹಿಳೆಯರು, ಈಗ ತಮ್ಮ ಜೀವನ ನಡೆಸುವುದಲ್ಲದೆ ಇನ್ನೊಬ್ಬರಿಗೆ ಉಪಯೋಗವಾಗುವಂತಹ ಕೆಲಸ ಮಾಡುತ್ತಿದ್ದಾರೆ.
ನಗರದ ಆರ್.ಕ್ಯೂಬ್ ಹೆಲ್ತ್ ಕೇರ್ ಎಂಬ ಸಂಸ್ಥೆಯ ಮಾಲಕಿ ರಶ್ಮಿ ಪ್ರಭುರವರ ನೇತೃತ್ವದಲ್ಲಿ, ಆಪರೇಷನ್ ಥಿಯೇಟರ್ ಹಾಗೂ ಕೋವಿಡ್ ವಾರ್ಡ್ನಲ್ಲಿ ವೈದ್ಯಕೀಯ ಸಿಬ್ಬಂದಿ ಬಳಸುವ ಗೌನ್, ಪಿಪಿಇ ಕಿಟ್, ಮಾಸ್ಕ್, ಸರ್ಜಿಕಲ್ ವಸ್ತುಗಳನ್ನು ಮಹಿಳೆಯರು ತಯಾರಿಸುತ್ತಿದ್ದಾರೆ. ಅವುಗಳನ್ನು ಜಿಲ್ಲಾಡಳಿತದ ಸಹಕಾರದೊಂದಿಗೆ ಕಡಿಮೆ ಬೆಲೆಗೆ ನಗರದ ಬಹುತೇಕ ಆಸ್ಪತ್ರೆಗಳಿಗೆ ಹಂಚಲು ಆರಂಭಿಸಿ ಯಶಸ್ವಿ ಕೂಡಾ ಆಗಿದ್ದಾರೆ.
ಇದನ್ನೂಓದಿ: ಏನೇ ಕೇಳಿದ್ರೂ ಥಟ್ ಅಂತ ಉತ್ತರ.. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದ ಪೋರಿ
ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ಜಿಲ್ಲಾಡಳಿತ ಲಾಕ್ ಡೌನ್ ಘೋಷಣೆ ಮಾಡಿತ್ತು. ಆಗ, ತಮ್ಮ ಜೀವನಕ್ಕೂ ದಾರಿಯಾಗಬೇಕು, ಬೇರೆಯವರಿಗೂ ಉಪಯೋಗವಾಗಬೇಕು ಎಂಬ ಉದ್ದೇಶದಿಂದ ಮಹಿಳೆಯರು ವೈದ್ಯಕೀಯ ವಸ್ತುಗಳನ್ನು ತಯಾರಿಸಲು ಪ್ರಾರಂಭಿಸಿದ್ದರು. ಯಾವ ಉದ್ದೇಶವನ್ನು ಇಟ್ಟುಕೊಂಡು ಮಹಿಳೆಯರು ತಮ್ಮ ಕಾರ್ಯವನ್ನು ಆರಂಭಿಸಿದ್ದರೋ, ಅದನ್ನು ಈಡೇರಿಸುವಲ್ಲಿ ಈಗ ಯಶಸ್ವಿಯಾಗಿದ್ದಾರೆ.
ಆರ್. ಕ್ಯೂಬ್ ಹೆಲ್ತ್ ಕೇರ್ ಹೆಸರಿನಲ್ಲಿ ಆರಂಭದಲ್ಲಿ ಬೇರೆ ಬೇರೆ ವಸ್ತುಗಳನ್ನು ತಯಾರಿಸುತ್ತಿದ್ದ ಈ ಮಹಿಳೆಯರು, ಈಗ ಪಿಪಿಇ ಕಿಟ್ ತಯಾರಿಸುವಲ್ಲಿ ನಿರತರಾಗಿದ್ದಾರೆ. ಇವರು ತಯಾರಿಸುವ ವಸ್ತುಗಳು ದಾವಣಗೆರೆಯ ಬಾಪೂಜಿ, ಎಸ್.ಎಸ್ ಆಸ್ಪತ್ರೆ, ಹುಬ್ಬಳ್ಳಿ ಕಿಮ್ಸ್, ಶಿವಮೊಗ್ಗದ ಸುಬ್ಬಯ್ಯ ಮೆಡಿಕಲ್ ಕಾಲೇಜು ಸೇರಿದಂತೆ ವಿವಿಧ ವೈದ್ಯಕೀಯ ಸಂಸ್ಥೆಗಳಿಗೆ ಪೂರೈಕೆ ಆಗುತ್ತದೆ. ಒಟ್ಟು 60 ಜನ ಮಹಿಳೆಯರು ಬೆಳಗ್ಗೆಯಿಂದ ಸಂಜೆ ತನಕ ಕೆಲಸ ಮಾಡುತ್ತಿದ್ದು, ಅವರಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ.