ದಾವಣಗೆರೆ: ಮದುವೆ ಅಂದ್ರೆ ಅಲ್ಲಿ ಸಡಗರ, ಸಂಭ್ರಮ ಮನೆ ಮಾಡಿರುತ್ತೆ. ಆಡಂಬರ, ವಿಜೃಂಭಣೆಗೆ ಕೊರತೆ ಇರಲ್ಲ. ಆದ್ರೆ, ಕೊರೊನಾ ಸೋಂಕು ಹರಡುವ ಭೀತಿ ಕಾರಣಕ್ಕೆ ಸರ್ಕಾರ ಮದುವೆಗೆ ಕೆಲ ನಿಬಂಧನೆಗಳನ್ನು ಹಾಕಿದೆ. ಅದಕ್ಕೆ ಇಲ್ಲೊಂದು ಜೋಡಿ ಡಿಫರೆಂಟ್ ಆಗಿ ಮದುವೆಯ ಕರೆಯೋಲೆ ನೀಡಿದೆ. ಮನೆಯಲ್ಲೇ ಇದ್ದು ಹಾರೈಸಿ ಎಂಬ ಮನವಿ ಮಾಡಿದೆ.
ದಾವಣಗೆರೆಯ ಜಯನಗರದ ವಂಕದಾರಿ ಕುಟುಂಬ ಮತ್ತು ಚಿಂತಾಲ ಕುಟುಂಬ ಬಂಧುಗಳಿಗೆ ಮದುವೆ ಬರುವುದು ಬೇಡ. ನವಜೀವನಕ್ಕೆ ಕಾಲಿಡುತ್ತಿರುವ ನವ ವಧು - ವರರಾದ ರಂಜಿತಾ ಮತ್ತು ನವೀನ್ ಅವರ ಮದುವೆಯಲ್ಲಿ ಭಾಗವಹಿಸಲು ಕೇವಲ 50 ಜನರಿಗೆ ಅವಕಾಶ ಇದೆ. ಸ್ನೇಹಿತರು, ಬಂಧು, ಬಳಗದವರು ಬರಲು ಆಗಲ್ಲ, ಮದುವೆ ಕಣ್ತುಂಬಿಕೊಳ್ಳಲು ಆಗಲ್ಲ ಎಂಬ ಕೊರಗು ನೀಗಿಸಲು ಈ ಕುಟುಂಬ ಹೊಸ ಐಡಿಯಾ ಕಂಡುಕೊಂಡಿದೆ. ಫೇಸ್ಬುಕ್ ಲೈವ್ ಕೋಡ್ತಿವಿ, ಅಲ್ಲಿಂದಲೇ ನೀವು ವಧು- ವರರಿಗೆ ಶುಭ ಹಾರೈಸಿ ಅಂತ ಮನವಿ ಮಾಡಿಕೊಂಡು ಮದುವೆಯ ಕರೆಯೋಲೆ ಮಾಡಿಸಲಾಗಿದೆ.
ಮದುವೆ ಇದೇ 15 ರಂದು ದಾವಣಗೆರೆಯ ಓಲ್ಡ್ ಸಿಟಿಯಲ್ಲಿನ ಕನ್ನಿಕಾ ಪರಮೇಶ್ವರಿ ದೇಗುಲದಲ್ಲಿ ಬೆಳಗ್ಗೆ 9.30 ಕ್ಕೆ ವಿವಾಹ ಮುಹೂರ್ತವಿದ್ದು, ಮಧ್ಯಾಹ್ನ 1 ಗಂಟೆಗೆ ಆರತಕ್ಷತೆ ನಡೆಯಲಿದೆ. ಮದುವೆಯ ಶಾಸ್ತ್ರ, ವಿಧಿ ವಿಧಾನ ಫೇಸ್ಬುಕ್ ಲೈವ್ ಬರಲಿದೆ. ಮನೆಯಲ್ಲೇ ಇದ್ದು ಕಣ್ತುಂಬಿಕೊಂಡು ಮನತುಂಬಿ ಹಾರೈಸಿ ಎಂದು ಮನವಿ ಮಾಡಿಕೊಳ್ಳಲಾಗಿದೆ.