ದಾವಣಗೆರೆ:ಕೊರೊನಾ ಸೋಂಕಿತರು ಹಾಗೂ ಮರಣ ಪ್ರಮಾಣದ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದ್ದು, ಕಂಗೆಟ್ಟಿದ್ದ ಬೆಣ್ಣೆನಗರಿಯ ಜನರು ಈಗ ನಿಟ್ಟುಸಿರುಬಿಡುವಂತಾಗಿದೆ.
ನಿತ್ಯ 2,500ಕ್ಕೂ ಅಧಿಕ ಗಂಟಲು ದ್ರವ ಪರೀಕ್ಷೆ ನಡೆಸಲಾಗುತ್ತಿದ್ದು, ಪ್ರತಿ ದಿನ 60 ರಿಂದ 70 ಹೀಗೆ 100ರೊಳಗೆ ಪ್ರಕರಣಗಳು ದೃಢಪಡುತ್ತಿವೆ. ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 21,160 ಪ್ರಕರಣಗಳ ಪೈಕಿ 20,564 ಮಂದಿ ಬಿಡುಗಡೆಯಾಗಿದ್ದು, 334 ಸಕ್ರಿಯ ಪ್ರಕರಣಗಳಿದ್ದು, 262 ಮಂದಿ ಮೃತಪಟ್ಟಿದ್ದಾರೆ (ನ.11ರವರೆಗೆ).
ಜಿಲ್ಲಾಡಳಿತದ ಮುಂದಿರುವ ಸವಾಲು ಏನು?:ನವೆಂಬರ್ನಿಂದ ಚಳಿಗಾಲ ಆರಂಭ. ಹೀಗಾಗಿ, ಈ ಕಾಲದಲ್ಲಿ ಪ್ರಕರಣ ಹೆಚ್ಚಾಗುವ ಸಾಧ್ಯತೆಯಿದೆ ಎಂಬ ಅಭಿಪ್ರಾಯ ತಜ್ಞರದ್ದು. ಒಂದು ದಿನಕ್ಕೆ 5000 ಜನರಿಗೆ ಚಿಕಿತ್ಸೆ ನೀಡಲು ಬೇಕಾದ ಮೂಲಸೌಕರ್ಯ, ಆಕ್ಸಿಜನ್, ಲಿಕ್ವಿಡ್ ಮೆಡಿಕಲ್, ಆಕ್ಸಿಜನ್ ಪ್ಲಾಂಟ್, ವೈದ್ಯಕೀಯ ತಜ್ಞರು, ಕನ್ಸಲ್ಟೆಂಟ್ಸ್, ಸಿಬ್ಬಂದಿಯನ್ನು ಜಿಲ್ಲಾಡಳಿತ ನೇಮಿಸಿದೆ.
ಆಕ್ಸಿಜನ್ ಬೆಡ್‍ಗಳ ಹೆಚ್ಚಳ:ಮೊದಲಿಗೆ ಹೋಲಿಸಿದರೆ ಆಕ್ಸಿಜನ್ ಬೆಡ್‍ಗಳ ಸಂಖ್ಯೆ ಹೆಚ್ಚಿದೆ. ಪ್ರಸ್ತುತ 717 ಆಕ್ಸಿಜನ್ ಬೆಡ್‍ಗಳಿದ್ದು, 38 ಹೆಚ್‍ಎಫ್‍ಓ, 31 ವೆಂಟಿಲೇಟರ್, 20 ನಾನ್‍ಇನ್‍ವೇಸಿವ್ ವೆಂಟಿಲೇಟರ್ಗಳಿವೆ. 8,000 ರ್ಯಾಪಿಡ್ ಕಿಟ್ಗಳು ಮತ್ತು 27 ಸಾವಿರ ಆರ್ಟಿಪಿಸಿಆರ್ ಕಿಟ್‍ಗಳ ದಾಸ್ತಾನು ಇದೆ.
ಶೇ.97ರಷ್ಟು ಸೋಂಕಿತರು ಗುಣಮುಖ:ಗುಣಮುಖರ ಪ್ರಮಾಣ ಶೇ.97.05, ಮರಣ ಪ್ರಮಾಣ ಶೇ.1.27 ಹಾಗೂ ಸಕ್ರಿಯ ಪ್ರಕರಣಗಳು ಶೇ.1.62ರಷ್ಟಿದೆ. ಹಬ್ಬ ಹರಿದಿನವೆನ್ನದೇ ಜನರನ್ನು ಸಿಬ್ಬಂದಿ ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ. ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಎಲ್ಲರೂ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಬೀಳಗಿ ಹೇಳಿದರು.