ದಾವಣಗೆರೆ: ನಾಳೆ (ಬುಧವಾರ) ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದ್ದು, ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳು ಮಾಡಿದ್ದಾರೆ. ಮತದಾರರನ್ನು ಆಕರ್ಷಿಸಲು ಜಿಲ್ಲೆಯಲ್ಲಿ ಸಖಿ ಹಾಗು ಲಂಬಾಣಿ ಸಂಸ್ಕೃತಿಯನ್ನು ಬಿಂಬಿಸುವ ವಿಶೇಷ ಮತಗಟ್ಟೆಗಳನ್ನು ತೆರೆಯಲಾಗಿದೆ. ಯುವ ಮತದಾರರನ್ನು ಸೆಳೆಯಲು ಯೂತ್ ಆಫೀಸರ್ಸ್ ಹೆಸರಿನ ಮತಗಟ್ಟೆಗಳನ್ನು ಸಿದ್ಧಪಡಿಸಲಾಗಿದೆ.
ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲೆಯಲ್ಲಿ ಒಟ್ಟು1685 ಮತಗಟ್ಟೆಗಳಿವೆ. ಎಲ್ಲ ಮತಗಟ್ಟೆಗಳಿಗೆ 8,050 ಮತಗಟ್ಟೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಒಂದು ಬೂತ್‌ನಲ್ಲಿ ನಾಲ್ವರು ಸಿಬ್ಬಂದಿಗಳಿರಲಿದ್ದಾರೆ. ಚುನಾವಣಾ ಪ್ರಕ್ರಿಯೆ ಬಗ್ಗೆ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.
ಚುನಾವಣೆಗೆ ಎಂ3 ಮಾಡೆಲ್ ಮತಪತ್ರಗಳು ಬಂದಿವೆ. ಅದನ್ನು ಯಾವ ರೀತಿ ಆಪರೇಟ್ ಮಾಡಬೇಕೆಂಬ ಬಗ್ಗೆ ತರಬೇತಿ ಹಾಗು ಮಾರ್ಗದರ್ಶನ ನೀಡಲಾಗಿದೆ. ಪೋಲಿಂಗ್ ಬೂತ್‌ಗೆ ತೆರಳಲು ಹಾಗು ಮತಗಟ್ಟೆಯಿಂದ ಹಿಂತಿರುಗುವ ತನಕ ಭದ್ರತೆಗಾಗಿ ಸೆಂಟ್ರಲ್ ಆರ್ಮ್ಡ್ ಫೋರ್ಸ್ ನಿಯೋಜನೆ ಮಾಡಲಾಗಿದೆ ಎಂದರು.
16 ವಿಶೇಷ ಮತೆಗಟ್ಟೆಗಳು:ಜಿಲ್ಲೆಯಲ್ಲಿ ಒಟ್ಟು 16 ವಿಶೇಷ ಮlಗಟ್ಟೆಗಳಿದ್ದು, 7 ಸಖಿ ಮತಗಟ್ಟೆ, 7 ಪಿಡ್ಲ್ಯೂಡಿ ಮತಗಟ್ಟೆಗಳು, 1 ಲಂಬಾಣಿ ಸಂಸ್ಕೃತಿ ಬಿಂಬಿಸುವ ಮತಗಟ್ಟೆ ಹಾಗು ಯೂತ್ ಆಫಿಸರ್ಸ್ ಮತಗಟ್ಟೆಗಳನ್ನು ತೆರೆಯಲಾಗಿದೆ. 338 ಬೂತ್‌ಗಳು ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳಿವೆ. ಎಲ್ಲ ಮತಗಟ್ಟೆಗಳ ಭದ್ರತೆಗೆ ಸೆಂಟ್ರಲ್ ಆರ್ಮ್ಡ್ ಫೋರ್ಸ್ ನಿಯೋಜನೆ ಮಾಡಲಾಗಿದ್ದು, ಸಿಸಿಟಿವಿ ಹಾಕಲಾಗಿದೆ ಎಂದು ಡಿಸಿ ಮಾಹಿತಿ ನೀಡಿದರು.