ದಾವಣಗೆರೆ: ಸ್ಮಾರ್ಟ್ ಸಿಟಿ ದಾವಣಗೆರೆ ನಗರದ ರಸ್ತೆಗಳಲ್ಲಿ ಗುಂಡಿಗಳು ಬಲಿಗಾಗಿ ಬಾಯ್ತೆರೆದಿವೆ. ಆ ಗುಂಡಿಗಳನ್ನು ಮುಚ್ಚದೆ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇನ್ನಾದರೂ ಅವರು ಕಣ್ತೆರೆದು ನೋಡಲಿ ಎಂದು ಯುವಕರ ತಂಡವೊಂದು ತಮ್ಮ ಸ್ವಂತ ಖರ್ಚಿನಲ್ಲಿ ಗುಂಡಿಗಳನ್ನು ಮುಚ್ಚುವ ಕೆಲಸವನ್ನು ಸದ್ದಿಲ್ಲದೆ ಮಾಡ್ತಿದೆ. ದಾವಣಗೆರೆ ಸ್ಮಾರ್ಟ್ ಸಿಟಿಗೆ ಒಳಪಟ್ಟರೂ ರಸ್ತೆಗಳು ಮಾತ್ರ ಸ್ಮಾರ್ಟ್ ಆಗಿ ಇರದೆ ಗುಂಡಿಮಯವಾಗಿವೆ.
ಮಳೆ ಬಂದ್ರೆ ಜನರು ಹೈರಾಣ.. ಮಳೆ ಬಂದಾಗ ರಾತ್ರಿ ವೇಳೆ ಅಥವಾ ಅವಸರದಿಂದ ಬೈಕ್ ಚಲಾಯಿಸಿದರೆ ಗುಂಡಿಯಲ್ಲಿ ಬಿದ್ದು ಕೈಕಾಲು ಮುರಿದುಕೊಳ್ಳುವುದು ಕಟ್ಟಿಟ್ಟಬುತ್ತಿ. ಇಲ್ಲಿನ ಜನರು ಹಾಗೂ ಕೆಲ ಯುವಕರ ಗುಂಪು ಪಾಲಿಕೆ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ರಸ್ತೆ ಗುಂಡಿಗಳನ್ನು ಮುಚ್ಚಿ ಜನರ ಜೀವ ಉಳಿಸಿ ಎಂದು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಶ್ರೀಕಾಂತ್, ರೋಹಿತ್, ದೀಪಕ್ ಸೇರಿದಂತೆ ಹಲವು ಯುವಕರು ಸೇರಿ ತಮ್ಮ ಸ್ವಂತ ಖರ್ಚಿನಲ್ಲಿ ರಸ್ತೆ ಗುಂಡಿಗಳನ್ನು ಸಿಮೆಂಟ್ನಿಂದ ಮುಚ್ಚುತ್ತಿದ್ದಾರೆ.
ಸದ್ದಿಲ್ಲದೆ ಗುಂಡಿಗಳನ್ನು ಮುಂಚುತ್ತಿದೆ ಯುವಕರ ತಂಡ ರಾತ್ರಿ ವೇಳೆ ಪರೋಪಕಾರದ ಕೆಲಸ..ಬೆಳಗ್ಗೆ ತಮ್ಮ ಜೀವನಾಧಾರಕ್ಕಿರುವ ಕೆಲಸ ಮುಗಿಸಿದ ಬಳಿಕ ಈ ಯುವಕರ ತಂಡ ರಾತ್ರಿ ವೇಳೆ ಅಂದ್ರೆ ವಾಹನ ಸಂಚಾರ ಕಡಿಮೆ ಇರುವ ಸಂದರ್ಭದಲ್ಲಿ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ನಗರದಲ್ಲಿ ರಸ್ತೆ ಗುಂಡಿಗಳಿಂದ ಜನಕ್ಕೆ ತೊಂದರೆಯಾಗ್ತಿದ್ದು, ತಕ್ಷಣ ಈ ಗುಂಡಿಗಳನ್ನು ಮಹಾನಗರ ಪಾಲಿಕೆ ಮುಚ್ಚುವ ಕೆಲಸ ಮಾಡ್ಬೇಕಾಗಿದೆ. ಇಲ್ಲವಾದಲ್ಲಿ ಚಂದಾ ರಸ್ತೆ ದುರಸ್ತಿ ಮಾಡ್ಬೇಕಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಅವರು ಪಾಲಿಕೆ ಅಧಿಕಾರಿಗಳಿಗೆ ಎಚ್ಚರಿಕೆ ರವಾನಿಸಿದ್ದಾರೆ.
ಇದನ್ನೂ ಓದಿ:ರಸ್ತೆ ಗುಂಡಿಗಳನ್ನು ಮುಚ್ಚಿ ಸಾರ್ವಜನಿಕರಿಗೆ ಸಹಕರಿಸಿದ ವಾಹನ ಸವಾರರು
ಇನ್ನು, ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈ ಗುಂಡಿಗಳಿಗೆ ಬೈಕ್ ಸವಾರರು ಬಿದ್ದು ಕೈ ಕಾಲು ಮುರಿದುಕೊಂಡ ಪ್ರಕರಣಗಳು ಹೆಚ್ಚಿವೆ. ಆದರೆ ಎಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲವಂತೆ. ಅಲ್ಲದೇ ಕಳೆದ ದೀಪಾವಳಿ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಪಾಲಿಕೆ ವಿರುದ್ಧ ಗುಂಡಿಗಳಲ್ಲಿ ದೀಪಗಳನ್ನು ಇಟ್ಟು ವಿನೂತನವಾಗಿ ಪ್ರತಿಭಟನೆ ಮಾಡಿದ್ದರು. ಹಾಗಿದ್ರೂ ಅಧಿಕಾರಿಗಳು ಮಾತ್ರ ಎಚ್ಚಿತ್ತುಕೊಳ್ಳದೇ ಇರುವುದು ದುರಂತ.