ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ಕುಂಬಳೂರು ಗ್ರಾಮದಲ್ಲಿ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಮೃತಪಟ್ಟ ಮಗುವಿನ ಮನೆಗೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಭೇಟಿ ನೀಡಿದ್ದಾರೆ. ಅಲ್ಲದೇ ಈ ಮೂಲಕ ಕುಟುಂಬಕ್ಕೆ ಐದು ಲಕ್ಷ ಪರಿಹಾರ ನೀಡಿದ್ದಾರೆ.
ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿ ಬೀಳುತ್ತಿರುವ ಬೆನ್ನಲ್ಲೇ ಇಂದು ಬೆಳಗಿನ ಜಾವ ಈ ಘಟನೆ ನಡೆದಿತ್ತು. ಘಟನೆಯಲ್ಲಿ ಸ್ಪೂರ್ತಿ (01) ಸಾವನಪ್ಪಿ ತಂದೆ ಕೆಂಚಪ್ಪ (32) ಗಾಯಗೊಂಡಿದ್ದರು. ಅವರಿಗೆ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ನಿರಂತರ ಮಳೆ ಬೀಳುತ್ತಿರುವ ಬೆನ್ನಲ್ಲೇ ಈ ಘಟನೆ ಜರುಗಿದೆ.
ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ಗಾಯಗೊಂಡ ಕೆಂಚಪ್ಪಗೆ ಸೇರಿದ ಮನೆ ಸಂಪೂರ್ಣವಾಗಿ ಹಾಳಾಗಿತ್ತು. ಗೋಡೆಗಳು ಕೂಡ ಬಿರುಕು ಬಿಟ್ಟಿದ್ದವು. ಮಳೆ ಬೀಳ್ತಿರುವುದರಿಂದ ಎಲ್ಲ ಗೋಡೆಗಳು ಹಸಿಯಾಗಿ ಕುಸಿದಿವೆ. ಇದರಿಂದ ಅವಘಡ ಸಂಭವಿಸಿದೆ. ಕಳೆದ ದಿನ ಮಳೆ ಹೆಚ್ಚಾಗಿದ್ದರಿಂದ ಮುಂಜಾಗ್ರತಾ ಕ್ರಮ ವಹಿಸದ ಕೆಂಚಪ್ಪ ಕುಟುಂಬ ರಾತ್ರಿ ವೇಳೆ ಅದೇ ಮನೆಯಲ್ಲಿ ನಿದ್ದೆಗೆ ಜಾರಿದ್ದಾರೆ.
ಕೆಂಚಪ್ಪ ಮಗು ಸ್ಪೂರ್ತಿ ಹಾಗೂ ಪತ್ನಿ ಲಕ್ಷ್ಮಿ ಮಲಗಿಕೊಂಡ ವೇಳೆ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಮನೆಯ ಗೋಡೆ ಕುಸಿದು ಬಿದ್ದು ಪುಟ್ಟ ಬಾಲಕಿ ಸ್ಪೂರ್ತಿಯನ್ನು ಬಲಿ ಪಡೆದಿದ್ದು, ತಂದೆ ತಾಯಿ ಇಬ್ಬರು ಪವಾಡ ಸದೃಶವಾಗಿ ಬದುಕುಳಿದಿದ್ದಾರೆ. ಈ ಘಟನೆ ಹರಿಹರ ತಾಲೂಕಿನ ಮಲೇಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿತ್ತು.
ಉಕ್ಕಡಗಾತ್ರಿ, ಪತ್ಯಾಪುರ ರಸ್ತೆ ಸಂಪರ್ಕ ಕಡಿತವಾಗಿದ್ದು, ಜಿಲ್ಲಾಧಿಕಾರಿ ಭೇಟಿ: ತುಂಗಾಭದ್ರ ನದಿ ನೀರಿನ ಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ಉಕ್ಕಡಗಾತ್ರಿ, ಪತ್ಯಾಪುರ ರಸ್ತೆ ಸಂಪರ್ಕ ಕಡಿತವಾಗಿದ್ದು, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅತಿಯಾದ ಮಳೆಯಿಂದಾಗಿ ಹರಿಹರ ತಾಲೂಕಿನ ತಿಮ್ಮಿನಕಟ್ಟೆ ಗ್ರಾಮದಲ್ಲಿ ಕೃಷಿ ಜಮೀನುಗಳು ಜಲಾವೃತಗೊಂಡಿದ್ದು, ಮಳೆಹಾನಿ ಸ್ಥಳಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಹರಿಹರ ತಹಶೀಲ್ದಾರ್ ಪೃಥ್ವಿ ಸ್ಥಾನಿಕಂ, ಮಲೆಬೆನ್ನೂರು ಉಪತಹಶೀಲ್ದಾರ್ ರವಿ ಜಿಲ್ಲಾಧಿಕಾರಿಗೆ ಸಾಥ್ ನೀಡಿದ್ರು.