ಹರಿಹರ: ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ರೈತನ ಕೈಗೆ ಸಿಗಬೇಕಾದ ಕಟಾವಿಗೆ ಬಂದ ಅಡಿಕೆ ಬೆಳೆಯನ್ನು ಕಳ್ಳರು ರಾತ್ರೋರಾತ್ರಿ ಲೂಟಿ ಮಾಡಿರುವ ಘಟನೆ ಹರಿಹರ ತಾಲೂಕಿನಲ್ಲಿ ಸಂಭವಿಸಿದೆ.
ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಮಹಜೇನಹಳ್ಳಿ ಸರ್ವೇ ನಂಬರ್ನಲ್ಲಿರುವ ನಾಲ್ಕು ಜನ ರೈತರ ಜಮೀನಿನಲ್ಲಿ ಫಲವತ್ತಾಗಿ ಬೆಳೆದಿದ್ದ ಅಡಿಕೆಯ ಗೊಂಚಲು ಸಮೇತ ಕಳ್ಳರು ಸೋಮವಾರ ರಾತ್ರಿ ಕದ್ದೊಯ್ದಿದ್ದಾರೆ. ಬೆಳಗ್ಗೆ ಆರು ಗಂಟೆಗೆ ರೈತ ಬಸವರಾಜ್ ತನ್ನ ಜಮೀನಿಗೆ ಹೋದಾಗ ಅಡಿಕೆ ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿರುವುದನ್ನು ಕಂಡು ದಿಗ್ಭ್ರಮೆಯಾಗಿ ತೋಟದ ಒಳಗಡೆ ಹೋಗಿ ನೋಡಿದಾಗ ಮರದಲ್ಲಿದ್ದ ಕಟಾವಿಗೆ ಬಂದ ಅಡಿಕೆ ಕತ್ತರಿಸಿರುವುದು ಕಂಡು ಬಂದಿದೆ.
ಕಟಾವಿಗೆ ಬಂದ ಅಡಿಕೆ ಬೆಳೆ ಕಳ್ಳರಿಂದ ರಾತ್ರೋರಾತ್ರಿ ಲೂಟಿ.. ಕೂಡಲೇ ತಮ್ಮ ಅಕ್ಕಪಕ್ಕದ ಜಮೀನಿನವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದಾಗ ಅವರು ಸಹ ತಮ್ಮ ಜಮೀನಿನಲ್ಲಿದ್ದ ಅಡಿಕೆ ಬೆಳೆ ನೋಡಿಕೊಂಡಾಗ ತಮ್ಮ ಹೊಲದಲ್ಲಿನ ಅಡಿಕೆ ಬೆಳೆ ಕಳ್ಳತನವಾಗಿರುವುದು ಕಂಡು ಬಂದಿದೆ. ಕೂಡಲೇ ಪೊಲೀಸರಿಗೆ ರೈತರು ಮಾಹಿತಿ ನೀಡಿದ್ದಾರೆ.
ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಳ್ಳತನವಾಗಿರುವ ಅಡಿಕೆ ವೀಕ್ಷಿಸಿದರು. ಕಳ್ಳತನವಾಗಿರುವ ಕುರಿತು ದೂರನ್ನು ನೀಡಿ, ನಾವು ತನಿಖೆಯನ್ನು ಕೂಡಲೇ ಪ್ರಾರಂಭಿಸುತ್ತೇವೆ ಎಂದು ರೈತರಿಗೆ ಧೈರ್ಯ ತುಂಬಿದರು. ಹನಗವಾಡಿಯ ಡಿ.ವೀರಭದ್ರಪ್ಪ, ಡಿ.ರಮೇಶ್, ಬಿ.ಕುರುವತ್ತೆಪ್ಪನವರ ಜಮೀನುಗಳಲ್ಲಿ ಅಡಕೆ ಬೆಳೆ ಕಳ್ಳತನವಾಗಿದೆ. ಸುಮಾರು ಮೂರು ಲಕ್ಷ ಮೌಲ್ಯದ ಬೆಳೆ ಕಳ್ಳರ ಪಾಲಾಗಿದೆ ಎಂದು ರೈತರು ಮಾಹಿತಿ ನೀಡಿದರು.
ಸ್ಥಳಕ್ಕೆ ಗ್ರಾಮಾಂತರ ಪಿಎಸ್ಐ ಡಿ.ರವಿಕುಮಾರ್, ಪಿಎಸ್ಐ ಸೈಫುದ್ದೀನ್, ಸಿಬ್ಬಂದಿ ಕೃಷ್ಣಾ, ವೆಂಕಟೇಶ್ ಹಾಗೂ ರೈತರಾದ ಬಸವರಾಜ್, ಪ್ರಶಾಂತ್, ಶಿವಶಂಕರ್, ರಾಕಿ, ಪ್ರವೀಣ್ ಹನಗವಾಡಿ, ವೀರೇಶ್ ಹಾಗೂ ಮತ್ತಿತರರಿದ್ದರು.