ದಾವಣಗೆರೆ: ಜಿಲ್ಲೆಯ ಫಾರಂ ಒಂದರಲ್ಲಿ 8 ಸಾವಿರಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿದ್ದರಿಂದ ಸತ್ತ ಕೋಳಿಗಳನ್ನು ಕೊಂಡಜ್ಜಿ ಅರಣ್ಯ ಪ್ರದೇಶಕ್ಕೆ ವಿಲೇವಾರಿ ಮಾಡಿರುವುದು ಗ್ರಾಮದಲ್ಲಿ ಹಕ್ಕಿಜ್ವರದ ಭೀತಿಗೆ ಕಾರಣವಾಗಿದೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮ ಕಳೆದ ಬಾರಿ ಹಕ್ಕಿಜ್ವರದಿಂದ ತತ್ತರಿಸಿ ಹೋಗಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಮತ್ತೆ ದಾವಣಗೆರೆ ಜಿಲ್ಲೆಯಲ್ಲಿ ಹಕ್ಕಿಜ್ವರದ ಶಂಕೆ ವ್ಯಕ್ತವಾಗುತ್ತಿದೆ. ಹರಿಹರ ತಾಲೂಕಿನ ಕೊಂಡಜ್ಜಿ ಪೌಲ್ಟ್ರಿ ಫಾರಂನಲ್ಲಿ ಕೋಳಿಗಳು ಸಾವನ್ನಪ್ಪಿದ್ದು, ಸತ್ತ ಕೋಳಿಗಳನ್ನು ಕೊಂಡಜ್ಜಿ ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ವಿಲೇವಾರಿ ಮಾಡಲಾಗಿದೆ.
ಕಳೆದ 8 ದಿನಗಳಲ್ಲಿ 7ರಿಂದ 8 ಸಾವಿರ ಕೋಳಿಗಳು ಸಾವನ್ನಪ್ಪಿದ್ದು, ಪೌಲ್ಟ್ರಿ ಫಾರಂ ಮಾಲೀಕರು ಸತ್ತ ಕೋಳಿಗಳನ್ನು ಕೊಂಡಜ್ಜಿ ಕೆರೆಯ ಅರಣ್ಯಪ್ರದೇಶದಲ್ಲಿ ಬಿಸಾಡಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.