ದಾವಣಗೆರೆ: ಕೊರೊನಾ ಭೀತಿ ನಡುವೆಯೂ ವಿದ್ಯಾಗಮ ಯೋಜನೆಯಡಿ ಪಾಠ ಪ್ರವಚನ ನಡೆಸಿದ್ದ ಶಿಕ್ಷಕರು ಹಾಗೂ ಮಕ್ಕಳಿಗೆ ಸೋಂಕು ತಗುಲಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 126 ಶಿಕ್ಷಕರಿಗೆ ವೈರಸ್ ತಗುಲಿದ್ದರೆ, ಎಂಟು ಮಂದಿ ಮೃತರಾಗಿರುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.
ಪಾಮೇನಹಳ್ಳಿಯಲ್ಲಿ ಇಬ್ಬರು ಶಿಕ್ಷಕರು ದೇವಸ್ಥಾನದಲ್ಲಿ ಮಕ್ಕಳಿಗೆ ಪಾಠ ಮಾಡಿದ್ದರು. ಇವರಲ್ಲಿ ಕೊರೊನಾ ಇರುವುದು ಖಚಿತವಾಗಿದೆ. ಇದು ಪೋಷಕರು ಹಾಗೂ ಮಕ್ಕಳಲ್ಲಿ ಭಯ ಹೆಚ್ಚಿಸಿದೆ. ದಾವಣಗೆರೆ ಉತ್ತರ 8, ದಾವಣಗೆರೆ ದಕ್ಷಿಣ 29, ಚನ್ನಗಿರಿ 26, ಜಗಳೂರು 12, ಹರಿಹರ 12, ಹೊನ್ನಾಳಿಯಲ್ಲಿ 29 ಶಿಕ್ಷಕರಿಗೆ ವೈರಾಣು ತಗುಲಿದೆ. ಇನ್ನು 97 ಶಿಕ್ಷಕರು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ದಾವಣಗೆರೆಯಲ್ಲಿ ಹೆಚ್ಚಿದ ಕೊರೊನಾ ದಾವಣಗೆರೆ ದಕ್ಷಿಣ 3, ಚನ್ನಗಿರಿ 2, ಜಗಳೂರು 2, ಹರಿಹರದಲ್ಲಿ ಓರ್ವ ಶಿಕ್ಷಕರು ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಇನ್ನು ಯಾವ ಶಿಕ್ಷಕರಿಗೂ ರಜೆ ನೀಡಿಲ್ಲ. ವಿದ್ಯಾಗಮ, ವಠಾರ ಕಾರ್ಯಕ್ರಮ ರೂಪಿಸಿ ಮಕ್ಕಳಿಗೆ ಪಾಠ, ಪ್ರವಚನ ನಡೆಯುತ್ತಿವೆ. ಆದ್ರೆ, ಯಾವ್ಯಾವ ಶಾಲೆಗಳ ಶಿಕ್ಷಕರಿಗೆ ಸೋಂಕು ತಗುಲಿದೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಎಷ್ಟು ಮಕ್ಕಳಿಗೆ ಸೋಂಕು ತಗುಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ಡಿಡಿಪಿಐ ಪರಮೇಶ್ವರಪ್ಪ ತಿಳಿಸಿದ್ದಾರೆ.
ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು ಎಂಬ ಕಾರಣಕ್ಕೆ ಸರ್ಕಾರ "ವಿದ್ಯಾಗಮ'' ಯೋಜನೆ ಜಾರಿಗೊಳಿಸಲಾಗಿತ್ತು. ಒಂದರಿಂದ ಐದು, ಆರರಿಂದ ಎಂಟು ಹಾಗೂ 9, 10 ನೇ ತರಗತಿಗಳ ವಿದ್ಯಾರ್ಥಿಗಳನ್ನು ವಿಂಗಡಣೆ ಮಾಡಲಾಗಿತ್ತು. ಇಪ್ಪತ್ತು ಮಕ್ಕಳಂತೆ ಬ್ಯಾಚ್ ಮಾಡಿ ಬೋಧನೆ ಮಾಡಲಾಗುತ್ತಿತ್ತು. ಜಿಲ್ಲೆಯಲ್ಲಿ 1075 ಪ್ರಾಥಮಿಕ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳು, 133 ಪ್ರೌಢಶಾಲೆ, ಅನುದಾನಿತ ಹಾಗೂ ಅನುದಾನರಹಿತ 650 ಶಾಲೆಗಳಿದ್ದು, ಒಟ್ಟು 2 ಲಕ್ಷದ 54 ಸಾವಿರ ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ 1 ಲಕ್ಷದ 50 ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಮಕ್ಕಳು ಇದ್ದರೆ, ಬೇರೆ ಶಾಲೆಗಳಲ್ಲಿ 1 ಲಕ್ಷದ 2 ಸಾವಿರ ಮಕ್ಕಳು ಅಭ್ಯಾಸ ಮಾಡ್ತಿದ್ದಾರೆ. ಈಗ ನೂರಕ್ಕೂ ಹೆಚ್ಚು ಶಿಕ್ಷಕರಲ್ಲಿ ಸೋಂಕು ತಗುಲಿರುವುದು ಭಯ ಹೆಚ್ಚಾಗುವಂತೆ ಮಾಡಿದೆ.