ದಾವಣಗೆರೆ : ಸುಮಾರು 750ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ಕಡೆದು ಹಾಕಿರುವ ಘಟನೆ ದಾವಣಗೆರೆ ತಾಲ್ಲೂಕಿನ ಮುದಹದಡಿ-ದುರ್ಗಾಂಭಿಕಾ ಕ್ಯಾಂಪ್ನಲ್ಲಿ ನಡೆದಿದೆ. ಮುದಹದಡಿ ಗ್ರಾಮದ ರೈತ ಬೀರಪ್ಪ ಎಂಬವರಿಗೆ ಸೇರಿದ ಅಡಿಕೆ ತೋಟ ನಾಶವಾಗಿದೆ. ಹದಡಿ ಪೊಲೀಸ್ ಠಾಣೆಯಲ್ಲಿ ಅವರು ಪ್ರಕರಣ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಭೇಟಿ ಪರಿಶೀಲನೆ ನಡೆಸಿದರು.
ಅಡಿಕೆಗೆ ಚಿನ್ನದ ಬೆಲೆ ಇರುವ ಕಾರಣ ಸಾಕಷ್ಟು ರೈತರು ಭತ್ತದ ಬೆಳೆ ಬೆಳೆಯುವ ಬದಲು ಅಡಿಕೆ ಬೆಳೆಯಲು ಮುಂದಾಗಿದ್ದಾರೆ. ಬೀರಪ್ಪ ಕೂಡ ಅಡಿಕೆಗೆ ಉತ್ತಮ ದರ ಸಿಗುತ್ತಿದೆ ಎಂದು ಭತ್ತದ ಬದಲು ಮೂರು ವರ್ಷಗಳ ಹಿಂದೆ 5 ಲಕ್ಷ ರೂ. ಖರ್ಚು ಮಾಡಿ ಅಡಿಕೆ ಗಿಡಗಳನ್ನು ಬೆಳೆಸಿದ್ದರು. ಇನ್ನೆರಡು ವರ್ಷ ಕಳೆದರೆ ಫಸಲು ಕೈ ಸೇರುತ್ತಿತ್ತು. ಆದರೆ ಕಿಡಿಗೇಡಿಗಳ ಅಟ್ಟಹಾಸಕ್ಕೆ ಗಿಡಗಳು ನೆಲಕಚ್ಚಿವೆ. ರೈತ ಹಾಗು ಆತನ ಕುಟುಂಬಸ್ಥರಿಗೆ ದಿಕ್ಕೇ ತೋಚದಂತಾಗಿದೆ. ನಾಶವಾದ ಅಡಿಕೆ ತೋಟ ಕಂಡು ವೃದ್ದೆ ಗೋಳಾಡಿದ ದೃಶ್ಯ ಮನಕಲಕುವಂತಿತ್ತು.
ರೈತ ಬೀರಪ್ಪ ಮಾತನಾಡಿ, "ನಾನು ಜಮೀನಿನಿಂದ ರಾತ್ರಿ ಮನೆಗೆ ತೆರಳಿದಾಗ ಘಟನೆ ನಡೆದಿದೆ. ನಮ್ಮ ಹುಡುಗ ಕರೆ ಮಾಡಿ ಈ ಬಗ್ಗೆ ಹೇಳಿದ. ಜಮೀನಿನ ಬಳಿ ಬಂದು ನೋಡಿದಾಗ 750 ಅಡಿಕೆ ಗಿಡಗಳನ್ನು ಕಡಿದಿರುವುದು ತಿಳಿದುಬಂತು. ಹದಡಿ ಪೊಲೀಸ್ ಠಾಣೆದೆ ದೂರು ನೀಡಿದ್ದೇವೆ. ನಮಗೆ ಯಾರ ಮೇಲೂ ದ್ವೇಷ ಇಲ್ಲ" ಎಂದು ಬೇಸರ ತೋಡಿಕೊಂಡರು.